ಮನೆ ಸುದ್ದಿ ಜಾಲ ‘ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್’ ಕಾಮಗಾರಿ ಪರಿಶೀಲಿಸಿದ ಪ್ರತಾಪ್ ಸಿಂಹ

‘ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್’ ಕಾಮಗಾರಿ ಪರಿಶೀಲಿಸಿದ ಪ್ರತಾಪ್ ಸಿಂಹ

0

ಮೈಸೂರು(Mysuru): ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಭಾರತೀಯ ಕಂಟೇನರ್‌ ನಿಗಮ(ಸಿಒಎನ್‌’ಸಿಒಆರ್)ದಿಂದ ನಿರ್ಮಾಣವಾಗುತ್ತಿರುವ ‘ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್’ (ಎಂಎಂಎಲ್‌’ಪಿ) ಕಾಮಗಾರಿಯನ್ನು ಸಂಸದ ಪ್ರತಾಪ್ ಸಿಂಹ ಬುಧವಾರ ಪರಿಶೀಲಿಸಿದರು.

ಕೈಗಾರಿಕೆಗಳ ಬಹಳ ಅನುಕೂಲ ಮಾಡಿಕೊಡುವ ಮಹತ್ವದ ಯೋಜನೆ ಇದಾಗಿದ್ದು, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಂದು ಕಡೆ ಮೈಸೂರು–ಬೆಂಗಳೂರು ದಶಪಥ ಸಿದ್ಧಗೊಳ್ಳುತ್ತಿದೆ. ಇನ್ನೊಂದೆಡೆ, ಮೈಸೂರು ವಿಮಾನನಿಲ್ದಾಣವನ್ನು ಕ್ರಿಯಾಶೀಲಗೊಳಿಸಿ ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ, ಮೈಸೂರು ಭಾಗದಲ್ಲಿ ಉದ್ಯಮ ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ, ಇನ್‌ಲ್ಯಾಂಡ್ ಕಂಟೇನರ್ ಡಿಪೊ ಬಹಳ ಮುಖ್ಯವಾಗುತ್ತದೆ. ಆದ್ದರಿಂದ 2015–16ರಲ್ಲೇ ‘ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್’ ಮೈಸೂರಿಗೆ ಮಂಜೂರಾದರೂ ಭೂಸ್ವಾಧೀನ ಮೊದಲಾದ ಸಮಸ್ಯೆಗಳಾಗಿದ್ದವು. ಅದೆಲ್ಲವನ್ನೂ ಪರಿಹರಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಹೇಳಿದರು.

102 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು (ಭೂಸ್ವಾಧೀನವೂ ಸೇರಿ) ನಡೆಸಲಾಗುತ್ತಿದೆ. ಇದು, ಡಿಸೆಂಬರ್‌ ವೇಳೆಗೆ ಸಿದ್ಧಗೊಳ್ಳಲಿದೆ. ಬೆಂಗಳೂರು ನಂತರ 2ನೇ ಕಂಟೇನರ್‌ ಡಿಪೊ ಇದಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಭಾಗವು ಅಭಿವೃದ್ಧಿಗೊಳ್ಳಲಿದೆ ಎಂದು ತಿಳಿಸಿದರು.

ಚೆನ್ನೈನಿಂದ ಮೈಸೂರಿಗೆ ವಾರಕ್ಕೆ ಮೂರು ಕಂಟೇನರ್‌’ಗಳ ಬರುತ್ತಿವೆ. ಅವುಗಳಿಗೆ ಚೆನ್ನೈನಲ್ಲೇ ಅನುಮತಿ ನೀಡಲಾಗುತ್ತಿದೆ. ಸುಂಕವನ್ನೂ ಅಲ್ಲೇ ಕಟ್ಟಿಸಿಕೊಳ್ಳಲಾಗುತ್ತಿದೆ. ಇಲ್ಲೇ ಆ ಕೆಲಸ ನಡೆದರೆ ನಮ್ಮ ಸರ್ಕಾರಕ್ಕೆ ವರಮಾನವೂ ಹೆಚ್ಚಲಿದೆ. ವಾರ್ಷಿಕವಾಗಿ 1.40 ಲಕ್ಷ ಕಂಟೇನರ್‌ಗಳನ್ನು ನಿರೀಕ್ಷಿಸಲಾಗುತ್ತಿದೆ. ಇಲ್ಲಿಂದಲೇ ರಫ್ತು ಹಾಗೂ ಆಮದು ನಡೆಯಲಿದೆ. ಅಗತ್ಯವಿದ್ದವರಿಗೆ, ಗೋದಾಮಿನ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ ಎಂದರು.

ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಧಿಕಾರಿ ಸತೀಶ್, ರೈಲ್ವೆ ಸಚಿವಾಲಯದ ಐಆರ್‌ಸಿಒಎನ್ (ಭಾರತೀಯ ರೈಲ್ವೆ ನಿರ್ಮಾಣ ಕಂಪನಿ) ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರೂ ಆಗಿರುವ ಯೋಜನೆಯ ಮುಖ್ಯಸ್ಥ ಶಶಿಧರ ಎಸ್.ಮಠದ, ಕಾಮಗಾರಿಯ ಗುತ್ತಿಗೆದಾರ ಎಸ್.ಜಿ. ಅಗರ್‌ವಾಲ್‌ ಕಂಪನಿಯ ದೀಪಕ್ ಅಗರ್‌ವಾಲ್‌ ಇದ್ದರು.

ಹಿಂದಿನ ಲೇಖನಸಿರಿಧಾನ್ಯಗಳಿಗೆ ಹೆಚ್ಚು ಮಹತ್ವ ನೀಡಿ: ಮೇಯರ್ ಶಿವಕುಮಾರ್
ಮುಂದಿನ ಲೇಖನಅಂಬಾ ನೀ ಹೂವ ಪಾಲಿಸೆ ವರ ನೀಡೆ