ಬೆಂಗಳೂರು (Bengaluru): ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳ್ಳಾರೆ ಗೌರಿಹೊಳೆಯ ಅಬಿದ್ (22) ಮತ್ತು ನೌಫಾಲ್ (25) ಎಂಬವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಇಲ್ಲಿಯುರೆಗೂ 6 ಮಂದಿಯನ್ನು ಬಂಧಿಸಲಾಗಿದೆ. ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ಶಫೀಕ್ ಮತ್ತು ಜಾಕೀರ್ ಎಂಬುವರನ್ನು ಜುಲೈ 28ರಂದು ಬಂಧಿಸಲಾಗಿತ್ತು. ಈ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ನಂತರ ವಿಚಾರಣೆ ಮುಂದುವರೆಸಿದಾಗ ಸಿಕ್ಕ ಮತ್ತಷ್ಟು ಸಾಕ್ಷಿ ಆಧಾರಗಳೊಂದಿಗೆ ಸದ್ದಾಂ ಮತ್ತು ಹ್ಯಾರಿಸ್ ಅವರನ್ನು ಬಂಧಿಸಿದ್ದರು. ಇದೀಗ ಅಬಿದ್ ಮತ್ತು ನೌಫಾಲ್ ನನ್ನು ಬಂಧಿಸಲಾಗಿದೆ.
ಜುಲೈ 26ರಂದು ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ನನ್ನು ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದರು.