ಮನೆ ಆರೋಗ್ಯ ಬೆಂಗಳೂರಿನಲ್ಲಿ ಮಂಕಿಪಾಕ್ಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ

ಬೆಂಗಳೂರಿನಲ್ಲಿ ಮಂಕಿಪಾಕ್ಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ

0

ಬೆಂಗಳೂರು(Bengaluru): ನಗರದಲ್ಲಿ ಮಂಕಿಪಾಕ್ಸ್ ಪ್ರಕರಣ ವರದಿಯಾಗಿಲ್ಲ. ಆದರೂ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮಂಕಿಪಾಕ್ಸ್ ಕುರಿತಂತೆ ಮುನ್ನೆಚ್ಚರಿಕೆಗಳನ್ನು ವಹಿಸಲಾಗುತ್ತಿದೆ. ಜೊತೆಗೆ ತಕ್ಷಣಕ್ಕೆ ಚಿಕಿತ್ಸೆ ಸಿಗುವಂತಹ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರ್ಕಾರ ಸೂಚನೆ ಪ್ರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.

ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವನೆ: ವಾರ್ಡ್ ಮರುವಿಂಡಗಣೆ ಈಗಾಗಲೇ ಪೂರ್ಣಗೊಂಡಿದ್ದು, ವಾರ್ಡ್‌ಗಳಿಗೆ ಬಜೆಟ್ ಪರಿಷ್ಕರಣೆ ಮಾಡಲಾಗುವುದು. ಅಲ್ಲದೇ, ಚುನಾವಣೆ ಸಂಬಂಧ ೧೯೯೩ರಿಂದ ಇಲ್ಲಿಯವರೆಗೆ ಗೆದ್ದ ಅಭ್ಯರ್ಥಿಗಳು ಹಾಗೂ ಮೀಸಲಾತಿ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಪ್ರತಿ ವಾರ್ಡ್‌ಗೆ ಎರಡೂವರೆ ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ವಾರ್ಡ್ ಕಚೇರಿ ಆರಂಭಿಸಲು ಸೂಚಿಸಿದ್ದು, ವಾರ್ಡ್ ನಕಾಶೆ ಆಧಾರದ ಮೇಲೆ ಕಚೇರಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ವಾರ್ಡ್‌ಗಳ ಸಂಖ್ಯೆ ಏರಿಕೆಯಾದ ಹಿನ್ನೆಲೆಯಲ್ಲಿ ೪೦೦ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.

ದಿನ ಸಾವಿರಾರು ಫ್ಲೆಕ್ಸ್‌ಗಳನ್ನು ತೆರವು ಮಾಡಲಾಗುತ್ತಿದೆ. ಇನ್ಮುಂದೆ ತಪ್ಪು ಮಾಡುವವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.