ನಟ ಪ್ರೇಮ್ ಅವರ ಹೊಸ ಚಿತ್ರವೊಂದು ಇತ್ತೀಚೆಗೆ ಆರಂಭವಾಗಿದೆ. ತೇಜೇಶ್ ಈ ಚಿತ್ರದ ನಿರ್ದೇಶಕರು. ಪಕ್ಕಾ ಆ್ಯಕ್ಷನ್ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಪ್ರೇಮ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಪ್ರೇಮ್, ಆ್ಯಕ್ಷನ್ ಸಿನಿಮಾ ಮಾಡದೇ ಬಹಳಷ್ಟು ಗ್ಯಾಪ್ ಆಗಿತ್ತು. ಒಂದೊಳ್ಳೆ ಕಥೆಯೊಂದಿಗೆ ನಿರ್ದೇಶಕರು ಬಂದರು. ಹೀಗಾಗಿ ಈ ಚಿತ್ರ ಒಪ್ಪಿಕೊಂಡೆ. ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದೇನೆ ಎಂದರು.
ನಿರ್ದೇಶಕ ತೇಜೇಶ್ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದೆ. ಟೈಟಲ್ ಚರ್ಚೆಯಲ್ಲಿದೆ. ಕಥೆಗೆ ಪ್ರೇಮ್ ಅವರು ಹೊಂದಿಕೆ ಆಗಿರುವುದರಿಂದ ಅವರನ್ನು ಆಯ್ಕೆ ಮಾಡಿದ್ದೇವೆ. ರಂಗಾಯಣ ರಘು ಅವರು ಚಿತ್ರದ ಭಾಗವಾಗಿದ್ದಾರೆ. ಈ ತಿಂಗಳಾತ್ಯಂಕ್ಕೆ ಶೂಟಿಂಗ್‌ಗೆ ಹೊರಡಲಿದ್ದೇವೆ ಎಂದು ಮಾಹಿತಿ ನೀಡಿದರು.
ಚಿತ್ರದ ಪೋಸ್ಟರ್ ನಲ್ಲಿ ರಗಡ್ ಲುಕ್ ನಲ್ಲಿ ಪ್ರೇಮ್ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಸಿಂಗಲ್ ಬ್ಯಾರಲ್ ಗನ್ ಹಿಡಿದುಕೊಂಡು ದೊಂಬಿ ಮಾಡೋರ ಕಡೆಗೆ ಮುಖ ಮಾಡಿ ನಿಂತಿದ್ದಾರೆ. ಯುವ ಪ್ರತಿಭೆ ತೇಜಸ್ ಬಿ.ಕೆ ಕಥೆ ಚಿತ್ರಕಥೆ ಬರೆದು ಸಿನಿಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ, ಆನಂದ್ ಮೀನಾಕ್ಷಿ ಛಾಯಾಗ್ರಹಣ ಚಿತ್ರಕ್ಕಿದೆ. ಹೆಸರಿಡದ ಈ ಸಿನಿಮಾಗೆ ಮಧು ಗೌಡ ಬಂಡವಾಳ ಹೂಡಿದ್ದಾರೆ.