ಬೆಂಗಳೂರು: ಪ್ರೀಮಿಯಂ ಮದ್ಯದ ಬೆಲೆ ಇಂದಿನಿಂದ ಅಗ್ಗವಾಗಲಿದೆ. ದುಬಾರಿ ಬ್ರಾಂಡ್ ಗಳ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬಜೆಟ್ ನಲ್ಲಿ ಘೋಷಿಸಿದಂತೆ ಜುಲೈ 1ರಿಂದ ರಾಜ್ಯದಲ್ಲಿ ಮದ್ಯದ ದರ ಇಳಿಕೆಯಾಗಬೇಕಿತ್ತು. ಜುಲೈನಿಂದ ಮದ್ಯದ ದರದಲ್ಲಿ ಪರಿಷ್ಕರಣೆ ಮಾಡುವ ಮೂಲಕ ಒಂದೆಡೆ ಮದ್ಯ ಪ್ರಿಯರಿಗೆ ಖುಷಿ ಪಡಿಸುವುದಷ್ಟೇ ಅಲ್ಲ ತನ್ನ ಅಬಕಾರಿ ಆದಾಯವನ್ನೂ ಹೆಚ್ಚಿಸುವ ಲೆಕ್ಕಾಚಾರ ರಾಜ್ಯ ಸರ್ಕಾರದ್ದಾಗಿತ್ತು. ಈ ಸಂಬಂಧ ಜುಲೈ 1ಕ್ಕೆ ಪರಿಷ್ಕೃತ ದರಗಳ ಅಧಿಸೂಚನೆ ಹೊರಡಿಸಿತ್ತು. ಆದರೆ, ಸಿಎಂ ಸೂಚನೆ ಮೇರೆಗೆ ದರ ಪರಿಷ್ಕರಣೆ ಆದೇಶ ಜಾರಿಯನ್ನು ತಡೆ ಹಿಡಿಯಲಾಗಿತ್ತು. ಇದೀಗ ಮತ್ತೆ ಕೆಲ ಪರಿಷ್ಕರಣೆ ಮಾಡಿ ದುಬಾರಿ ಬ್ರಾಂಡ್ಗಳ ಮದ್ಯದ ಮೇಲಿನ ದರವನ್ನು 15-20% ವರೆಗೆ ಕಡಿತಗೊಳಿಸಿ ಆದೇಶ ಹೊರಡಿಸಿದೆ.
ಪರಿಷ್ಕೃತ ದರದಂತೆ ಮದ್ಯದ ಸ್ಲ್ಯಾಬ್ ವಾರು ದರವನ್ನು ಪರಿಷ್ಕರಿಸಿರುವ ಸರ್ಕಾರ ಪ್ರಸ್ತುತ ಇದ್ದ 18 ಸ್ಲ್ಯಾಬ್ಗಳಲ್ಲಿ ವಿಧಿಸಲಾಗುತ್ತಿದ್ದ ಅಬಕಾರಿ ಸುಂಕವನ್ನು 16 ಸ್ಲ್ಯಾಬ್ಗಳಿಗೆ ಇಳಿಕೆ ಮಾಡಿದೆ. ಅದಕ್ಕನುಗಣವಾಗಿ ಅಬಕಾರಿ ಸುಂಕವನ್ನು ಪರಿಷ್ಕರಿಸಿದೆ. ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಪರಿಷ್ಕೃತ ದರ ಹೇಗಿರಲಿದೆ?: ಅಬಕಾರಿ ಇಲಾಖೆ ಪ್ರತಿ ಬಾಕ್ಸ್ (8.64/9/12 ಬಲ್ಕ್ ಲೀಟರ್ ಮದ್ಯದ ಬಾಕ್ಸ್)ನ ಘೋಷಿತ ಉತ್ಪಾದನಾ ಬೆಲೆಯ ಆಧಾರದಲ್ಲಿ ಸ್ಲ್ಯಾಬ್ ವೈಸ್ ಅಬಕಾರಿ ಸುಂಕ ವಿಧಿಸುತ್ತದೆ. ಪ್ರಸ್ತುತ ಅಬಕಾರಿ ಸುಂಕವನ್ನು 18 ಸ್ಲ್ಯಾಬ್ಗಳಲ್ಲಿ ವಿಧಿಸಲಾಗುತ್ತಿತ್ತು. ಇದೀಗ ಪರಿಷ್ಕೃತ ಅಬಕಾರಿ ಸುಂಕದಲ್ಲಿ ಪ್ರಸ್ತುತ ಇರುವ 18 ಸ್ಲ್ಯಾಬ್ಗಳನ್ನು 16ಕ್ಕೆ ಕಡಿತಗೊಳಿಸಲಾಗಿದೆ. ಹಳೆಯ ಸ್ಲ್ಯಾಬ್ಗೆ ಹೋಲಿಸಿದರೆ 5ನೇ ಸ್ಲ್ಯಾಬ್ನಿಂದ 16 ಸ್ಲ್ಯಾಬ್ ವರೆಗಿನ ಮದ್ಯದ ದರದಲ್ಲಿ ಇಳಿಕೆ ಮಾಡಲಾಗಿದೆ.
ಪರಿಷ್ಕೃತ 16 ಸ್ಲ್ಯಾಬ್ ವೈಸ್ ಘೋಷಿತ ಉತ್ಪಾದನಾ ಬೆಲೆಯ ಪ್ರಕಾರ 0-450 ಘೋಷಿತ ಉತ್ಪಾದನಾ ದರ ಸ್ಲ್ಯಾಬ್ಗೆ ಹೆಚ್ಚುವರಿ ಅಬಕಾರಿ ಸುಂಕ 215 ರೂ. ಇರಲಿದೆ. 451-500 ದರ ಸ್ಲ್ಯಾಬ್ಗೆ ಸುಂಕ 294 ರೂ. ಪರಿಷ್ಕರಣೆ ಆಗಲಿದೆ. ಇನ್ನು 501-550 ದರ ಸ್ಲ್ಯಾಬ್ಗೆ ಹೆಚ್ಚುವರಿ ಸುಂಕ 386 ರೂ., 551-650 ಘೋಷಿತ ಉತ್ಪಾದನಾ ದರ ಸ್ಲ್ಯಾಬ್ಗೆ ಸುಂಕ 523 ರೂ., 651-750 ವರೆಗಿನ ಘೋಷಿತ ಉತ್ಪಾದನಾ ದರ ಸ್ಲ್ಯಾಬ್ಗೆ ಹೆಚ್ಚುವರಿ ಸುಂಕ 620 ರೂ., 751-900 ದರ ಸ್ಲ್ಯಾಬ್ಗೆ ಸುಂಕ 770 ರೂ., 901-1050 ದರ ಸ್ಲ್ಯಾಬ್ಗೆ ಸುಂಕ 870 ರೂ., 1051-1300 ದರ ಸ್ಲ್ಯಾಬ್ಗೆ ಸುಂಕ 970 ರೂ., 1301-1800 ದರ ಸ್ಲ್ಯಾಬ್ಗೆ ಸುಂಕ 1200 ರೂ., 1801-2500 ದರ ಸ್ಲ್ಯಾಬ್ಗೆ ಸುಂಕ 1400 ರೂ., 2501-5000 ದರ ಸ್ಲ್ಯಾಬ್ಗೆ ಸುಂಕ 1600 ರೂ., 5001-8000 ದರ ಸ್ಲ್ಯಾಬ್ಗೆ ಸುಂಕ 2000 ರೂ., 8001-12,500 ದರ ಸ್ಲ್ಯಾಬ್ಗೆ ಸುಂಕ 2400 ರೂ., 12501-15000 ದರ ಸ್ಲ್ಯಾಬ್ಗೆ ಸುಂಕ 2600 ರೂ., 15001-20000 ದರ ಸ್ಲ್ಯಾಬ್ಗೆ ಸುಂಕ 2800 ರೂ. ಮತ್ತು 20000 ಮೇಲ್ಪಟ್ಟ ದರ ಸ್ಲ್ಯಾಬ್ ಗೆ ಹೆಚ್ಚುವರಿ ಅಬಕಾರಿ ಸುಂಕ 3000 ರೂ. ವಿಧಿಸಲಾಗುತ್ತದೆ.