ಮೈಸೂರು(Mysuru): ಇಂಧನ ಇಲಾಖೆ ಅಧಿಕಾರಿಗಳಿಗೆ ನನ್ನ ಅವಧಿಯ ದಾಖಲೆ ತರುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಕೆಲ ಅಧಿಕಾರಿಗಳು ನನಗೆ ಕರೆ ಮಾಡಿದ್ದರು. ನನ್ನ ಅವಧಿಯ ದಾಖಲೆ ತರುವಂತೆ ಹೆದರಿಸುತ್ತಿದ್ದು, ನಾನು ಎಲ್ಲಾ ದಾಖಲೆಗಳನ್ನು ಕೊಡಿ ಎಂದು ಹೇಳಿದ್ದೇನೆ. ತಪ್ಪು ಮಾಡಿದ್ದರೆ ನಾವೇ ಹಗ್ಗ ಸಹ ಕಳುಹಿಸಿ ಕೊಡುತ್ತೇವೆ. ಈ ಮೂಲಕ ಕಾಂಗ್ರೆಸ್ ಮತ್ತು ನನ್ನನ್ನು ಹೆದರಿಸಲು ಬಿಜೆಪಿ ಮುಂದಾಗಿದೆ. ನಾನು ಯಾವುದಕ್ಕೂ ಹೆದರುವವನಲ್ಲ. ಏನು ಬೇಕಾದರೂ ತನಿಖೆ ಮಾಡಿಕೊಳ್ಳಲಿ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಸಮಗ್ರ ತನಿಖೆ ಹೇಳಿಕೆಗೆ ವ್ಯಂಗ್ಯವಾಡಿದ ಅವರು, ಚಡ್ಡಿ ಪ್ಯಾಂಟು ಹಾಸಿಗೆ ಮೊಟ್ಟೆ ಇತ್ಯಾದಿ ಎಲ್ಲಾ ತನಿಖೆ ಮಾಡಲಿ. ನಾನು ಎಲ್ಲದಕ್ಕೂ ಸಿದ್ದನಾಗಿದ್ದೇನೆ ತನಿಖೆ ಆರಂಭಿಸಲು . ಮೂರು ವರ್ಷ ಬೇಕಿತ್ತೇ ಎಂದು ಪ್ರಶ್ನಿಸಿದರು.
ದಾಖಲೆ ಮುಚ್ಚಿಟ್ಟಿದ್ದಾರೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ತಿರುಗೇಟು ನೀಡಿದ ಅವರು, ಉತ್ತು ಹಾರೆ ತೆಗೆದುಕೊಂಡು ಬುಲ್ಡೋಜರ್ ನಲ್ಲಿ ಅಗೆಯಲಿ, ಬೋರ್ ತೆಗೆಸಲಿ, ನಮಗೇನು ಸಮಸ್ಯೆ ಇಲ್ಲ ಎಂದರು.