ಮನೆ ರಾಷ್ಟ್ರೀಯ 71,000 ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ

71,000 ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ

0

ನವದೆಹಲಿ: 71,000 ಕ್ಕೂ ಹೆಚ್ಚು ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದರು.

ಕೇಂದ್ರ ಸರ್ಕಾರ ಆಯೋಜಿಸಿದ್ದ ಎರಡನೇ ‘ರೋಜ್‌ಗಾರ್ ಮೇಳ’ (ಉದ್ಯೋಗ ಮೇಳ) ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಲ್ಲಿ ಎನ್‌’ಡಿಎ ಆಡಳಿತವಿರುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೇ ರೀತಿಯ ಅಭಿಯಾನಗಳನ್ನು ನಡೆಸಲಾಗಿದೆ ಎಂದು ಹೇಳಿದರು.

ಇದು ಡಬಲ್ ಎಂಜಿನ್ ಸರ್ಕಾರಗಳ ಡಬಲ್ ಪ್ರಯೋಜನವಾಗಿದೆ. ಯುವಕರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸುವ ಅಭಿಯಾನವು ನಿರಂತರ ರೀತಿಯಲ್ಲಿ ಮುಂದುವರಿಯಲಿದೆ ಎಂದು ಮೋದಿ ನುಡಿದರು.

ಕಳೆದ ಒಂದು ತಿಂಗಳಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳು ಸಾವಿರಾರು ನೇಮಕಾತಿ ಪತ್ರಗಳನ್ನು ನೀಡಿವೆ. ಕೆಲ ದಿನಗಳ ಹಿಂದೆ, ಉತ್ತರ ಪ್ರದೇಶ ಸರ್ಕಾರವು ಹಲವಾರು ಯುವಕರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಚಂಡೀಗಢದಲ್ಲಿ ಸಹ ರೋಜ್‌ಗಾರ್ ಮೇಳಗಳನ್ನು ಆಯೋಜಿಸಿ ಸಾವಿರಾರು ಯುವಕರಿಗೆ ಉದ್ಯೋಗಗಳನ್ನು ಹಸ್ತಾಂತರಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಗೋವಾ ಮತ್ತು ತ್ರಿಪುರಾ ಸರ್ಕಾರಗಳು ಕ್ರಮವಾಗಿ ನವೆಂಬರ್ 24 ಮತ್ತು ನವೆಂಬರ್ 28 ರಂದು ರೋಜಗಾರ್ ಮೇಳ ಆಯೋಜಿಸುತ್ತಿವೆ ಎಂದು ಅವರು ಹೇಳಿದರು.

ಯುವಕರು ದೇಶದ ದೊಡ್ಡ ಶಕ್ತಿಯಾಗಿದ್ದು, ಅವರ ಪ್ರತಿಭೆಯನ್ನು ರಾಷ್ಟ್ರ ನಿರ್ಮಾಣದಲ್ಲಿ ಬಳಸಿಕೊಳ್ಳುವಂತೆ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಮೋದಿ ಹೇಳಿದರು.

ಪ್ರಧಾನಮಂತ್ರಿಗಳು ಒಟ್ಟು 71,056 ಹೊಸ ನೇಮಕಾತಿ ಪತ್ರಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿತರಿಸಿದರು.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಹೊರತುಪಡಿಸಿ ದೇಶಾದ್ಯಂತ 45 ಸ್ಥಳಗಳಲ್ಲಿ ನೇಮಕಾತಿ ಪತ್ರಗಳ ಭೌತಿಕ ಪ್ರತಿಗಳನ್ನು ಹಸ್ತಾಂತರಿಸಲಾಗಿದೆ.

ರೋಜ್‌ಗಾರ್ ಮೇಳದೊಂದಿಗೆ ಪ್ರಧಾನಿ ಮೋದಿ ಮಂಗಳವಾರ ಕರ್ಮಯೋಗಿ ಪ್ರಾರಂಭ್ ಮಾಡ್ಯೂಲ್‌’ಗೆ ಚಾಲನೆ ನೀಡಿದರು.