ಮನೆ ರಾಜ್ಯ ಕೆಎಸ್ಎಸ್ ಸಂಸ್ಕೃತ ಪಾಠಶಾಲೆ, ವಿದ್ಯಾರ್ಥಿನಿಯಲದ ನೂತನ ಕಟ್ಟಡ ಉದ್ಘಾಟಿಸಿದ ಪ್ರಧಾನಿ ಮೋದಿ

ಕೆಎಸ್ಎಸ್ ಸಂಸ್ಕೃತ ಪಾಠಶಾಲೆ, ವಿದ್ಯಾರ್ಥಿನಿಯಲದ ನೂತನ ಕಟ್ಟಡ ಉದ್ಘಾಟಿಸಿದ ಪ್ರಧಾನಿ ಮೋದಿ

0

ಮೈಸೂರು (Mysuru): ಜೆಎಸ್ಎಸ್ ಮಹಾವಿದ್ಯಾಪೀಠದಿಂದ‌ ನಿರ್ಮಿಸಿರುವ ಕೆಎಸ್ಎಸ್ ಸಂಸ್ಕೃತ ಪಾಠಶಾಲೆ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು.

ಇಲ್ಲಿನ ಚಾಮುಂಡಿ ಬೆಟ್ಟ ತಪ್ಪಲಿನಲ್ಲಿರುವ ಸುತ್ತೂರು ಮಠದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ವಿಜಯಪುರ ‌ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಇಂಗ್ಲಿಷ್‌ನಲ್ಲಿ ವ್ಯಾಖ್ಯಾನಿಸಿರುವ ‘ಯೋಗ ಸೂತ್ರಾಸ್’, ‘ಶಿವ ಸೂತ್ರಾಸ್’ ಹಾಗೂ ‘ನಾರದ ಭಕ್ತಿ ಸೂತ್ರಾಸ್’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು.

ಸುತ್ತೂರು ಶ್ರೀಗಳು ಮೋದಿ ಅವರಿಗೆ ಬಸವಣ್ಣನವರ ಫೋಟೊ ನೀಡಿದರು. ಮೋದಿ ತಮ್ಮ ತಾಯಿಯೊಂದಿಗೆ ಕುಳಿತಿರುವ ದೊಡ್ಡ ಕಲಾಕೃತಿಯನ್ನು ಸ್ಮರಣಿಕೆಯಾಗಿ ನೀಡಿದ್ದು, ಗಮನಸೆಳೆಯಿತು. ಅವರಿಗೆ ರುದ್ರಾಕ್ಷಿ ಮಾಲೆಯನ್ನೂ ಹಾಕಿದರು.‌ ತಮಗೆ ನೀಡಿದ ಬಸವಣ್ಣನವರ ಫೋಟೊಗೆ‌ ಮೋದಿ ನಮಸ್ಕಾರ ಮಾಡಿದ್ದು ವಿಶೇಷವಾಗಿತ್ತು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಂಸ್ಕೃತವು ಪ್ರಾಚೀನ ಭಾಷೆ. ಅನೇಕ ಭಾಷೆಗಳ ಮಾತೃ ಭಾಷೆಯೂ ಹೌದು. ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಪ್ರಾಚೀನ ಸಂಸ್ಕೃತಿ ಬಗ್ಗೆ ಹೊಂದಿರುವ ಅಭಿಮಾನದ ಸಂಕೇತವಾಗಿದೆ ಎಂದರು.

ಸುತ್ತೂರು ಶ್ರೀಮಠವು ಶಾಂತಿ, ಸಮಾನತೆ, ಸಹಬಾಳ್ವೆ ಮೂಡಿಸುವ ಕೆಲಸವನ್ನು ಮಾಡುತ್ತಿದೆ. 85 ವರ್ಷಗಳ ಹಿಂದೆ ಕ್ಯಾತನಹಳ್ಳಿ ಸಾಹುಕಾರ್ ಸಿದ್ದಲಿಂಗಯ್ಯ (ಕೆಎಸ್ಎಸ್) ಅವರು ಸಂಸ್ಕೃತ ಶಾಲೆಗೆ ಕಟ್ಟಡ ನೀಡಿದ್ದರು. ಹೀಗಾಗಿ ಅವರ ಹೆಸರನ್ನೇ ಮುಂದುವರಿಸಿಕೊಂಡು ಬರಲಾಗುತ್ತಿದೆ. ಈಗ ಆ ಕಟ್ಟಡವನ್ನು ನವೀಕರಿಸಲಾಗಿದೆ. 15ರಿಂದ ಪ್ರಾರಂಭವಾದ ಶಾಲೆಯಲ್ಲಿ ಈಗ 450 ವಿದ್ಯಾರ್ಥಿಗಳಿದ್ದಾರೆ ಎಂದು ತಿಳಿಸಿದರು.

ಮೋದಿ ಅವರು ಒಮ್ಮೆ ಸುತ್ತೂರು, ನಂತರ ರಾಜೇಂದ್ರ ಶ್ರೀಗಳ ಶತಮಾನೋತ್ಸವಕ್ಕೆ ಬಂದಿದ್ದರು. ಈಗ 3ನೇ ಬಾರಿಗೆ ಮಠಕ್ಕೆ ಭೇಟಿ ನೀಡಿದ್ದಾರೆ ಎಂದರು.

ದೇಶವು ಹಿಂದೆಂದೂ ಕಾಣದಷ್ಟು ಅಭಿವೃದ್ಧಿಯನ್ನು ಅವರ ಅವಧಿಯಲ್ಲಿ ಕಂಡಿದೆ. ಕಳೆದ ಎಂಟು ವರ್ಷಗಳಿಂದ ರಜೆಯನ್ನೇ ಪಡೆಯದೆ ಪ್ರಧಾನಿ ಕೆಲಸ ಮಾಡಿದವರು ಯಾರಾದರೂ ಇದ್ದರೆ ಅವರು ಮೋದಿ ಮಾತ್ರ. ಇಂತಹ ನಾಯಕನನ್ನು ವಿಶ್ವವು ಇತ್ತೀಚಿನ ದಿನಗಳಲ್ಲಿ ಕಂಡಿಲ್ಲ. ಮೋದಿ ಇದ್ದರೆ ಎಲ್ಲವೂ ಸಾಧ್ಯ ಎನ್ನುವುದನ್ನು ಅವರು ನಿರೂಪಿಸಿದ್ದಾರೆ. ಕಾಶ್ಮೀರ, ಶ್ರೀರಾಮ‌‌ ಮಂದಿರ‌ ಮೊದಲಾದ ಜಟಿಲ ಸಮಸ್ಯೆಗಳನ್ನು ಅವರು ಬಗೆಹರಿಸಿದ್ದಾರೆ ಎಂದು ಶ್ರೀಗಳು ಶ್ಲಾಘಿಸಿದರು.

ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಕ್ಷೇತ್ರದ ಸಿದ್ಧಲಿಂಗ ಸ್ವಾಮೀಜಿ ಹಾಗೂ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಧ್ಯಕ್ಷತೆ‌ ವಹಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರದ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ,‌ ಸಂಸದ ಪ್ರತಾಪ ಸಿಂಹ ಪಾಲ್ಗೊಂಡಿದ್ದರು.