ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ರಾಜಧಾನಿ ಗಾಂಧಿನಗರದಲ್ಲಿ ‘ಪಿಎಂ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆ’ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಿಯವರು ಬೆಳಗ್ಗೆ 10 ಗಂಟೆಗೆ ವಾವೋಲ್‌ನಲ್ಲಿರುವ ಶಾಲಿನ್-2 ಸೊಸೈಟಿಯನ್ನು ತಲುಪಿದರು ಮತ್ತು ಫೆಬ್ರವರಿ 29 ರಂದು ಪ್ರಾರಂಭಿಸಲಾದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 75,021 ಕೋಟಿ ರೂ. ಯೋಜನೆಯಡಿಯಲ್ಲಿ ತಮ್ಮ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಿರುವ ಹಲವಾರು ನಿವಾಸಿಗಳೊಂದಿಗೆ ಸಂವಾದ ನಡೆಸಿದರು.
ಸುಮಾರು 20 ನಿಮಿಷಗಳ ಕಾಲ ಈ ವಸತಿ ಸಂಕೀರ್ಣದಲ್ಲಿ ಪ್ರಧಾನಿ ತಂಗಿದ್ದರು. ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಸತಿ ಗೃಹಗಳು ತಮ್ಮ ಸ್ವಂತ ವಿದ್ಯುತ್ ಉತ್ಪಾದಿಸಲು ಅನುವು ಮಾಡಿಕೊಡುವುದು ಈ ಯೋಜನೆಯ ಉದ್ದೇಶವಾಗಿದೆ.
ಸರ್ಕಾರಕ್ಕೆ ಒಟ್ಟು ವಿದ್ಯುತ್ ವೆಚ್ಚದಲ್ಲಿ ಉಳಿತಾಯವಾಗುತ್ತದೆ, ನವೀಕರಿಸಬಹುದಾದ ಶಕ್ತಿಯ ಸದ್ಬಳಕೆಯಾಗುವುದು, ಮನೆಗಳಿಗೆ ಉಚಿತ ವಿದ್ಯುತ್ ಸಿಗುವುದು. ಪ್ರಧಾನಿ ಮೋದಿ ಈ ಕುರಿತು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದು, ನಾನು ಇತ್ತೀಚೆಗೆ ಗುಜರಾತ್ಗೆ ಭೇಟಿ ನೀಡಿದ್ದಾಗ ಶಗಶಿಭಾಯಿ ಸುತಾರ್ ಅವರ ಮನೆಗೆ ಹೋಗಿದ್ದೆ, ಅವರ ಕುಟುಂಬವು ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಿಂದ ಪ್ರಯೋಜನ ಪಡೆದಿದೆ. ನಾನು ಇತರೆ ಫಲಾನುಭವಿಗಳನ್ನು ಕೂಡ ಭೇಟಿಯಾದೆ ಅದರ ಹೈಲೈಟ್ಸ್ ಇಲ್ಲಿದೆ ಎಂದು ಬರೆದಿದ್ದಾರೆ.
ಯೋಜನೆಯ ಪ್ರಯೋಜನ ಪಡೆಯಲು ಮಾನದಂಡಗಳು ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು. ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ ಮೇಲ್ಛಾವಣಿಯನ್ನು ಹೊಂದಿರುವ ಮನೆಯನ್ನು ಹೊಂದಿರಬೇಕು. ಮನೆಯು ಮಾನ್ಯವಾದ ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು. ಮನೆಯವರು ಸೋಲಾರ್ ಪ್ಯಾನೆಲ್‌ಗಳಿಗೆ ಬೇರೆ ಯಾವುದೇ ಸಬ್ಸಿಡಿಯನ್ನು ಪಡೆದಿರಬಾರದು.
1 ಕಿಲೋ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 30,000 ರೂ. ಸಬ್ಸಿಡಿ ದೊರೆಯುತ್ತಿದ್ದು, 2 ಕಿಲೋ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 60,000 ರೂ. ಸಬ್ಸಿಡಿ ನಿಗದಿಪಡಿಸಲಾಗಿದೆ. 3 ಕಿಲೋ ವ್ಯಾಟ್ ಮೇಲ್ಪಟ್ಟ ವ್ಯವಸ್ಥೆಗೆ ಗರಿಷ್ಠ ಸಬ್ಸಿಡಿ ಮಿತಿ 78,000 ರೂ. ದೊರೆಯಲಿದೆ.