ನವದೆಹಲಿ : ಪ್ರಧಾನ ಮಂತ್ರಿಗಳ ನೂತನ ಕಚೇರಿ ಉದ್ಘಾಟನೆಗೆ ಸಿದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಕರ ಸಂಕ್ರಾಂತಿಯ ದಿನದಂದೇ ಅವರು ಹೊಸ ಕಚೇರಿಗೆ ಸ್ಥಳಾಂತರಗೊಳ್ಳಲಿದ್ದಾರೆ. 1947 ರ ಬಳಿಕ ಅಂದ್ರೆ ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಗಳ ಕಚೇರಿ ಬದಲಾವಚಣೆ ಮಾಡುತ್ತಿರುವುದು ಗಮನಾರ್ಹ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ʻಸೆಂಟ್ರಲ್ ವಿಸ್ಟಾʼ ಯೋಜನೆ ಭಾಗವಾಗಿ ನಿರ್ಮಿಸಲಾದ ʻಸೇವಾ ತೀರ್ಥʼ ಸಂಕೀರ್ಣಕ್ಕೆ ಪ್ರಧಾನಿ ಮೋದಿ ಅವರು ಜ.14ರ ʻಮಕರ ಸಂಕ್ರಾಂತಿʼಯಂದೇ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ. ಈ ಸಂಕೀರ್ಣವನ್ನ ಪ್ರಧಾನಿಗಳ ಕಚೇರಿ, ಕ್ಯಾಬಿನೆಟ್ ಸಚಿವಾಲಯ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಕಚೇರಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಂದಕ್ಕೂ ಪ್ರತ್ಯೇಕ ಕಟ್ಟಡವನ್ನ ಮೀಸಲಿರಿಸಲಾಗಿದೆ.
ಪ್ರಧಾನಿಗಳ ಹೊಸ ಕಚೇರಿಗೆ ʻಸೇವೆʼ ಎಂಬ ವಸ್ತುವಿಷಯವನ್ನಾಧರಿಸಿ ʻಸೇವಾ ತೀರ್ಥ-1ʼ ಎಂದು ನಾಮಕರಣ ಮಾಡಲಾಗಿದೆ. ಜೊತೆಗೆ ಸೇವೆಯ ಮಹತ್ವವನ್ನು ಬಿಂಬಿಸುವ ಆಧುನಿಕ ಕಾರ್ಯಕ್ಷೇತ್ರಗಳು ಹಾಗೂ ಭವ್ಯ ಸಮಾರಂಭ ಕೊಠಡಿಗಳನ್ನೂ ಒಳಗೊಂಡಿದೆ. ಇನ್ನೂ ಕ್ಯಾಬಿನೆಟ್ ಸಚಿವಾಲಯಕ್ಕೆ ನಿರ್ಮಿಲಾದ ಕಚೇರಿಗೆ ʻಸೇವಾ ತೀರ್ಥ -2ʼ, ರಾಷ್ಟ್ರೀಯ ಭದ್ರತಾ ಸಲಹೆಗಾರರ ಕಚೇರಿಗೆ ʻಸೇವಾ ತೀರ್ಥ-3ʼ ಎಂದು ನಾಮಕರಣ ಮಾಡಲಾಗಿದೆ.
ಪ್ರಧಾನಿಗಳ ಕಚೇರಿಯನ್ನೊಳಗೊಂಡ ಸಂಪೂರ್ಣ ʻಸೇವಾ ತೀರ್ಥʼ ಸಂಕೀರ್ಣವನ್ನ 1,189 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರ ಒಟ್ಟು ವಿಸ್ತೀರ್ಣ 2,26,203 ಚದರ ಅಡಿ ಇದೆ. ಇನ್ನೂ ಪ್ರಧಾನ ಮಂತ್ರಿಯವರ ಹೊಸ ಅಧಿಕೃತ ನಿವಾಸವನ್ನ ʻಕಾರ್ಯನಿರ್ವಾಹಕ ಎನ್‌ಕ್ಲೇವ್ ಭಾಗ 2ʼ ಎಂದು ಹೆಸರಿಸಲಾಗಿದೆ.
ಪ್ರಧಾನ ಮಂತ್ರಿಗಳು ಹೊಸ ಕಚೇರಿಗೆ ಸ್ಥಳಾಂತರಗೊಳ್ಳುತ್ತಿದ್ದಂತೆ ದಕ್ಷಿಣ ಮತ್ತು ಉತ್ತರ ಬ್ಲಾಕ್‌ಗಳಲ್ಲಿರುವ ಕಚೇರಿಗಳನ್ನು ವಸ್ತು ಸಂಗ್ರಹಾಲಯಗಳನ್ನಾಗಿ ಬದಲಾವಣೆ ಮಾಡಲಾಗುತ್ತದೆ, ʻ’ಯುಗೆ ಯುಗೀನ್ ಭಾರತ್ ಸಂಗ್ರಹಾಲಯʼ ಹೆಸರಿನಲ್ಲಿ ಸಾರ್ವಜನಿಕ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗುತ್ತದೆ. ಯೋಜಿತ ವಸ್ತು ಸಂಗ್ರಹಾಲಯದ ಅಭಿವೃದ್ಧಿಗಾಗಿ 2024ರ ಡಿಸೆಂಬರ್ 19 ರಂದು ಫ್ರಾನ್ಸ್‌ನ ಮ್ಯೂಸಿಯಂ ಅಭಿವೃದ್ಧಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.















