ಮನೆ ರಾಷ್ಟ್ರೀಯ ಲಾಲೂ ಪ್ರಸಾದ್‌ ಯಾದವ್‌ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ

ಲಾಲೂ ಪ್ರಸಾದ್‌ ಯಾದವ್‌ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ

0

ಪಾಟ್ನಾ (Patna): ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಎಡವಿ ಬಿದ್ದು ಭುಜದ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಧಾನಿ ಮೋದಿ ಅವರು ಲಾಲೂ ಅವರ ಆರೋಗ್ಯ ವಿಚಾರಿಸಿದ್ದಾರೆ.

ಮೋದಿ ಅವರು ಲಾಲೂ ಪ್ರಸಾದ್ ಯಾದವ್ ಅವರ ಪುತ್ರನಿಗೆ ಕರೆ ಮಾಡಿ ಆರೋಗ್ಯವನ್ನು ವಿಚಾರಿಸಿದ್ದಾರೆ. ಮೋದಿ ಅವರು ಲಾಲೂ ಪ್ರಸಾದ್ ಅವರ ಆರೋಗ್ಯ ವಿಚಾರಿಸಿದ ಬಗ್ಗೆ ಆರ್‌ಜೆಡಿ ವಕ್ತಾರ ಚಿತ್ತರಂಜನ್ ಗಗನ್ ಅವರು ಮಾಹಿತಿ ನೀಡಿದ್ದು, ಪ್ರಧಾನಿ ಮೋದಿ ಅವರು ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರಿಗೆ ಕರೆ ಮಾಡಿ ಮಾತನಾಡಿ ಆರ್‌ಜೆಡಿ ಮುಖ್ಯಸ್ಥರ ಆರೋಗ್ಯವನ್ನು ವಿಚಾರಿಸಿದ್ದಾರೆ ಮತ್ತು ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ’ ಎಂದು ತಿಳಿಸಿದ್ದಾರೆ.

74 ವರ್ಷ ವಯಸ್ಸಿನ ಲಾಲೂ ಪ್ರಸಾದ್ ಯಾದವ್ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸೋಮವಾರ (ಜುಲೈ 4) ಅವರು ಪಾಟ್ನಾದಲ್ಲಿರುವ ಪತ್ನಿ ರಾಬ್ರಿ ದೇವಿ ಅವರ ನಿವಾಸದಲ್ಲಿ ತಂಗಿದ್ದರು. ಸೋಮವಾರ ಬೆಳಿಗ್ಗೆ ತಮ್ಮ ಮನೆಯ ಮೆಟ್ಟಿಲುಗಳನ್ನು ಇಳಿಯುವಾಗ ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯವಾಗದೆ ಎಡವಿ ಬಿದ್ದಿದ್ದಾರೆ. ಇದರಿಂದ ಅವರ ಭುಜ ಮತ್ತು ಬೆನ್ನಿಗೆ ಪೆಟ್ಟಾಗಿದೆ. ಬಲ ಭುಜದ ಮೂಳೆ ಮುರಿತಕ್ಕೊಳಗಾಗಿದೆ ಎಂದು ವೈದ್ಯ ಮೂಲಗಳು ತಿಳಿಸಿದ್ದು, ಕೂಡಲೇ ಅವರನ್ನು ಪಾಟ್ನಾದ ಪಾರಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಲಾಲೂ ಪ್ರಸಾದ್ ಅವರಿ ಐಸಿಯುನಲ್ಲಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಲಾಲು ಪ್ರಸಾದ್ ಅವರಿಗೆ ಇತ್ತೀಚೆಗೆ ಭುಜದ ಆಪರೇಷನ್ ಮಾಡಲಾಗಿತ್ತು. ಅಂದಿನಿಂದ ಅವರ ಆರೋಗ್ಯ ಸ್ಥಿತಿ ಅಷ್ಟೇನೂ ಸ್ಥಿರವಾಗಿರಲಿಲ್ಲ. ಈ ಮಧ್ಯೆ ಮತ್ತೊಮ್ಮೆ ಅವರು ಎಡವಿಬಿದ್ದು ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ.