ಮನೆ ರಾಜ್ಯ ಸೆ.2 ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ

ಸೆ.2 ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ

0

ಮಂಗಳೂರು (Mangalore): ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನುಲೋಕಾರ್ಪಣೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸೆ.2 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಭರದ ಸಿದ್ಧತೆಗಳು ಆರಂಭಗೊಂಡಿವೆ.

ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ)ದಲ್ಲಿ ಸುಮಾರು 1,200 ಕೋಟಿ ರೂ. ವೆಚ್ಚದ ನಾನಾ ಕಾಮಗಾರಿಗೆ ಶಿಲಾನ್ಯಾಸ ಮತ್ತು ಅನಘಾ ರಿಫೈನರಿ ಬರ್ತ್‌ ಸೇರಿದಂತೆ ನಾನಾ ಯೋಜನೆಯನ್ನು ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.

ಮೋದಿ ಅವರು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಸರಣಿ ಸಭೆ ನಡೆಸಲಾಗುತ್ತಿದ್ದು, ಭರದ ಸಿದ್ಧತೆ ನಡೆಯುತ್ತಿದೆ. ಸಂಸದ ನಳಿನ್‌ ಕುಮಾರ್‌ ನೇತೃತ್ವದಲ್ಲಿ ಪೂರ್ವಸಿದ್ಧತಾ ಸಭೆ ಸೋಮವಾರ ನಡೆಸಲಾಗಿದೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಭದ್ರತೆ ಸೇರಿದಂತೆ ಪೂರಕ ಸಿದ್ಧತೆಗಳ ಸಭೆ ನಡೆಸತೊಡಗಿದ್ದಾರೆ. ಸಮಾವೇಶ ನಡೆಯಲಿರುವ ಗೋಲ್ಡ್‌ಪಿಂಚ್‌ ಸಿಟಿ, ಪ್ರಧಾನಿ ವಾಸ್ತವ್ಯ ನಿಲ್ಲುವ ಸಕ್ರ್ಯೂಟ್‌ ಹೌಸ್‌ನ ಸುತ್ತಮುತ್ತ ಈಗಲೇ ಸಿದ್ಧತೆಗಳು ಆರಂಭಗೊಂಡಿದೆ. ಪ್ರಧಾನಿ ಸಾಗುವ ರಸ್ತೆಯನ್ನು ಸಮರ್ಪಕಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ಅವರ ಜತೆ ಸಂಸದರು ಮಾತುಕತೆ ನಡೆಸಿ ನಿರ್ದೇಶನ ನೀಡಿದ್ದಾರೆ.

ದಕ್ಷಿಣ ಕನ್ನಡ ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸುದ್ದಿಗಾರರಿಗೆ ಮಾಹಿತಿ ನೀಡಿ, ಬೆಳಿಗ್ಗೆ ಕೊಚ್ಚಿನ್‌ ಬಂದರು ಕಾರ್ಯಕ್ರಮ ಬಳಿಕ ಸಂಜೆ 3.45ಕ್ಕೆ ಮಂಗಳೂರಿಗೆ ಆಗಮಿಸಲಿದ್ದು, ಎನ್‌ಎಂಪಿಎಗೆ ಭೇಟಿ ನೀಡಿ ಅಲ್ಲಿ ನಾನಾ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ನೆರವೇರಿಸಿದ ಬಳಿಕ ಸಂಜೆ 5 ಗಂಟೆಗೆ ಗೋಲ್ಡ್‌ ಫಿಂಚ್‌ ಸಿಟಿ ಮೈದಾನದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಎರಡು ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆ ಅಂತಿಮಗೊಳ್ಳಲಿದೆ ಎಂದರು.

ಸೆ.2ರಂದು ಬೆಳಿಗ್ಗೆ ಕೊಚ್ಚಿನ್‌ ಶಿಫ್‌ಯಾರ್ಡ್‌ನಲ್ಲಿ ದೇಶದ ಪ್ರಥಮ ಸ್ವದೇಶಿ ನಿರ್ಮಿತ ವಿಕ್ರಾಂತ್‌ ಯುದ್ಧವಾಹಕ ನೌಕೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುವರು. ಮಧ್ಯಾಹ್ನ ಮಂಗಳೂರಿಗೆ ಆಗಮಿಸಿ ಎನ್‌ಎಂಪಿಎ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ ದೆಹಲಿಗೆ ತೆರಳುವ ಸಾಧ್ಯತೆಗಳಿವೆ. ನವಮಂಗಳೂರು ಬಂದರಿಗೆ ಭೇಟಿ ನೀಡುವ ಪ್ರಧಾನಿಯವರು ಅಲ್ಲಿ ಈಗಾಗಲೇ ಪೂರ್ಣಗೊಂಡಿರುವ ಅನಘಾ ರಿಫೈನರಿ, ಬರ್ತ್‌ ನಂ.14 ಸೇರಿದಂತೆ 6 ಯೋಜನೆಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅದೇ ರೀತಿ ಸಾಗರಮಾಲಾ ಯೋಜನೆಯ ಕೆಲವು ಅಭಿವೃದ್ಧಿ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.