ಮನೆ ರಾಜ್ಯ ಪ್ರಧಾನ ಕವಿಗೋಷ್ಠಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ ಅವರಿಂದ ಉದ್ಘಾಟನೆ

ಪ್ರಧಾನ ಕವಿಗೋಷ್ಠಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ ಅವರಿಂದ ಉದ್ಘಾಟನೆ

0

ಮೈಸೂರು(Mysuru): ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಮಾನಸಗಂಗೋತ್ರಿಯ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ “ಪ್ರಧಾನ ಕವಿಗೋಷ್ಠಿ” ಕಾರ್ಯಕ್ರಮವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ್ ಕಂಬಾರ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕನ್ನಡದ ಕಾವ್ಯ ಭಾರತದ ಯಾವುದೇ ಭಾಷೆಯ ಕಾವ್ಯಕ್ಕಿಂತಲೂ ವಿಶಿಷ್ಟವಾಗಿ ಬೆಳೆದು ಬಂದಿದ್ದು, ಕನ್ನಡದ ಕವಿಗಳು ಮುಂಚೂಣಿಯಲ್ಲಿದ್ದಾರೆ. ನಮಗೆ ಯಾವ ಶಿಕ್ಷಣ ನೀಡಬೇಕು ಎಂಬುದನ್ನು ಬ್ರಿಟಿಷರು ನಿರ್ಧರಿಸಿದ್ದರಿಂದ ಪ್ರಾಥಮಿಕ, ಮಾಧ್ಯಮಿಕ ಹಾಗೂ ಯೂನಿವರ್ಸಿಟಿ ಹಂತದ ಶಿಕ್ಷಣ ಜಾರಿಗೆ ಬಂತು ಎಂದರು.
ನಾವು ಕಾಲಚಕ್ರದ ಮೇಲೆ ನಂಬಿಕೆ ಇಟ್ಟಿದ್ದು, ರಾಮ, ಸೀತೆ ಇನ್ನೂ ಪ್ರಚಾರದಲ್ಲಿದ್ದಾರೆ. ತಿರುಪತಿ ತಿಮ್ಮಪ್ಪ ತನ್ನ ಮದುವೆಗೆ ಮಾಡಿದ ಸಾಲವನ್ನು ಜನರು ಹುಂಡಿಗೆ ಹಣ ಹಾಕುವ ಮೂಲಕ ಇಂದಿಗೂ ಸಾಲ ತೀರಿಸುತ್ತಿದ್ದಾರೆ ಎಂದು ಉದಾಹರಣೆ ನೀಡಿದರು.
ಬ್ರಿಟಿಷರು ಭೂತ, ವರ್ತಮಾನ, ಭವಿಷ್ಯಕಾಲ ಎಂಬುದನ್ನು ತಿಳಿಸಿದರು. ಆದರೆ, ನಾವು ಕಾಲ ಎಂದಿಗೂ ಒಂದೇ ಎಂಬುದಾಗಿ ನಂಬುತ್ತೇವೆ. ಹಾಗಾಗಿ, ನಮ್ಮ ಕಲ್ಪನೆಗೂ ಬ್ರಿಟಿಷರ ಕಲ್ಪನೆಗೂ ವ್ಯತ್ಯಾಸವಿದೆ ಎಂದು ತಿಳಿಸಿದರು. ಜಲರಾಯ ಎಂಬ ಕವಿತೆಯನ್ನು ವಾಚನ ಮಾಡಿ, ಕವನ ವಾಚನ ಮಾಡಲು ಆಗಮಿಸಿದ ಕವಿಗಳಿಗೆ ಶುಭ ಹಾರೈಸಿದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಮಾತನಾಡಿ, ಕವಿಗೋಷ್ಠಿಯನ್ನು ಬಹಳ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ್ ಕಂಬಾರ ಅವರ ಉಪಸ್ಥಿತಿಯು ನಿಜಕ್ಕೂ ಸಂತೋಷವನ್ನುAಟು ಮಾಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕವಿ,ನಾಟಕಕಾರರಾದ ಡಾ.ಎಚ್.ಎಸ್.ಶಿವಪ್ರಕಾಶ್ ಅವರು ಮಾತನಾಡಿ, ಸಂತೋಷದ ವಿಷಯ ಎಂದರೆ ಹದಿನೈದು ವರ್ಷದ ಹಿಂದಿಗಿAತ ಇಂದು ಕವಿಗಳ ಸಂಖ್ಯೆ ಜಾಸ್ತಿಯಾಗಿದೆ. ಅನೇಕ ಜನ ಯುವ ಕವಿಗಳು ಎಲ್ಲಾ ವರ್ಗಗಳಿಂದ ಸಶಕ್ತವಾಗಿ ಕಾವ್ಯಾಭಿವ್ಯಕ್ತಿ ಮಾಡುತ್ತಿದ್ದಾರೆ. ಯಾವ ಭಾಷೆಯಲ್ಲಿ ಕಾವ್ಯಾಭಿವ್ಯಕ್ತಿ ಚನ್ನಾಗಿ ನಡೆಯುತ್ತಿದೆಯೋ ಆ ಭಾಷೆಗೆ ಭವಿಷ್ಯವಿದೆ. ಕವಿಗಳು ಇದನ್ನು ಮನಗಾಣಬೇಕು. ಕನ್ನಡ ಕಾವ್ಯಕ್ಕೆ ಸುಧೀರ್ಘವಾದ ಇತಿಹಾಸವಿದೆ ಎಂದು ಹೇಳಿದರು.
ಶಾಲೆ,ಕಾಲೇಜು ನಿರ್ಮಾಣವಾಗುವುದಕ್ಕೂ ಮುನ್ನ, ಸರ್ವರಿಗೂ ಶಿಕ್ಷಣ ಲಭ್ಯವಿಲ್ಲದಿದ್ದಾಗ, ಜನರ, ಸರ್ವರ ವಿವಿಗಳಾಗಿ ಸರ್ವಜ್ಞರ ಹಾಗೂ ವಚನಕಾರರ ವಚನಗಳಿದ್ದವು. ಇವುಗಳ ಮೂಲಕ ಜನರಿಗೆ ದೈವಿಕ ಸಂಕಲ್ಪದಲ್ಲಿ ಅರಿವನ್ನು, ಶಿಕ್ಷಣವನ್ನು ನೀಡಲಾಗುತ್ತಿತ್ತು. ಅದು ಇಂದಿನ ಶಿಕ್ಷಣಕ್ಕಿಂತ ಹೆಚ್ಚು ಸಶಕ್ತವಾಗಿತ್ತು ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಖಡ್ಗವಾಗಲಿ ಕವಿತೆ ಎಂಬ ಕವಿತೆಯನ್ನು ವಾಚನ ಮಾಡಿದರು. ಗೋಷ್ಠಿಯಲ್ಲಿ 30 ಕ್ಕೂ ಹೆಚ್ಚು ಮಂದಿ ಕವಿಗಳು ಕವಿತೆ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಮೇಯರ್ ಶಿವಕುಮಾರ್, ಕವಿಗೋಷ್ಠಿ ಉಪಸಮಿತಿ ಅಧ್ಯಕ್ಷರಾದ ಸಿ.ಬಿ.ಬಸವರಾಜಪ್ಪ, ಉಪವಿಶೇಷಾಧಿಕಾರಿ ಎಂ.ದಾಸೇಗೌಡ ಇತರರು ಉಪಸ್ಥಿತರಿದ್ದರು.

  • ಟ್ಯಾಗ್ಗಳು
  • dasara
ಹಿಂದಿನ ಲೇಖನಹಾಸ್ಯ ಚಟಾಕಿ
ಮುಂದಿನ ಲೇಖನನಾಡಹಬ್ಬ ದಸರಾ: ಬಸ್’ಗಳ ಸಂಚಾರ ಮಾರ್ಗ ಬದಲು