ಮನೆ ರಾಜ್ಯ ಜೈಲಿನಲ್ಲಿ ಕೈದಿಗಳ ಮೋಜು-ಮಸ್ತಿ; ಗುಂಡು-ತುಂಡು ಪಾರ್ಟಿ, ಗಾಂಜಾ ಮತ್ತಲ್ಲಿ ತೇಲಾಟ..!

ಜೈಲಿನಲ್ಲಿ ಕೈದಿಗಳ ಮೋಜು-ಮಸ್ತಿ; ಗುಂಡು-ತುಂಡು ಪಾರ್ಟಿ, ಗಾಂಜಾ ಮತ್ತಲ್ಲಿ ತೇಲಾಟ..!

0

ಹುಬ್ಬಳ್ಳಿ : ಬೆಂಗಳೂರು, ಶಿವಮೊಗ್ಗ, ಕಲಬುರಗಿ, ಬೆಳಗಾವಿ ಆಯ್ತು. ಈಗ ಹುಬ್ಬಳ್ಳಿ ಸಬ್ ಜೈಲು ಸರದಿ ಬಂದಿದೆ. ಜೈಲಿನಲ್ಲಿ ಕೈದಿಗಳು, ಕೊಲೆ ಆರೋಪಿಗಳು ಮೋಜು-ಮಸ್ತಿ ಮಾಡಿಕೊಂಡಿದ್ದಾರೆ. ಗಾಂಜಾ, ಮದ್ಯ, ಮಾಂಸ ಸೇವನೆಯಲ್ಲಿ ಕೈದಿಗಳು ತೇಲಾಡುತ್ತಿರುವ ವಿಡಿಯೋ ಹೊರಬಿದ್ದಿದೆ.

ರೆಸಾರ್ಟ್ನಲ್ಲೂ ಸೀಗದ ಸೌಲಭ್ಯ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಸುಲಭವಾಗಿ ಸಿಗುತ್ತಿವೆ. ಜೈಲಿನಲ್ಲೇ ಕೈದಿಗಳು ಮೋಜು-ಮಸ್ತಿಯಲ್ಲಿದ್ದಾರೆ. ಗುಂಡು, ತುಂಡು, ಗಾಂಜಾ, ಟಿವಿ, ಮೊಬೈಲ್‌ಗಳನ್ನು ಬಳಿಸಿಕೊಂಡು ಮಜಾ ಮಾಡುತ್ತಿರುವ ಕೈದಿಗಳ ವಿಡಿಯೋ ‘ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ. ಟೈಮ್‌ಪಾಸ್ ಮಾಡಲು ಕೇರಂ ಬೋರ್ಡ್ ವ್ಯವಸ್ಥೆ ಕೂಡ ಮಾಡಲಾಗಿದೆ.

ಮೂರು ದಿನದ ಹಿಂದೆಯಷ್ಟೆ ಹುಬ್ಬಳ್ಳಿ ಕಾರಾಗೃಹಕ್ಕೆ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದರು. ಹುಬ್ಬಳ್ಳಿ ಉಪ ಕಾರಾಗೃಹ ಹಾಗೂ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಆದರೆ, ಭೇಟಿ ನೀಡಿದ ಮೂರು ದಿನಗಳಲ್ಲೇ ಜೈಲಿನೊಳಗೆ ಎಗ್ಗಿಲ್ಲದೇ ಗಾಂಜಾ ಸಪ್ಲೈ ಆಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಹುಬ್ಬಳ್ಳಿ ಸಬ್ ಜೈಲ್ ವಿಡಿಯೋ ವೈರಲ್ ಆಗಿದೆ. ವಿಡಿಯೋ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ಸತ್ಯ ಒಪ್ಪಿಕೊಂಡಿದ್ದಾರೆ. ವಿಡಿಯೋಗಳು ಸಬ್ ಜೈಲಿನದ್ದು, ಆದರೆ ಡಿಸೆಂಬರ್ 2025 ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದಾರೆ. ವಾಟ್ಸಾಪ್ ಮೆಸೇಜ್ ಮೂಲಕ ವಿಡಿಯೋ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ. ಸಂಬಂಧಿತ ಘಟನೆ ನಡೆದಿರುವುದು ಸತ್ಯವಾಗಿದೆ.

ಆದರೆ, ಅದು ನಾನು ಹುದ್ದೆ ಸ್ವೀಕರಿಸುವ ಮೊದಲು ನಡೆದದ್ದು ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಹುದ್ದೆ ಸ್ವೀಕರಿಸಿದ ನಂತರ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದೇನೆ. ಸಂಬಂಧಪಟ್ಟ ಸಿಬ್ಬಂದಿಯ ನಿರ್ಲಕ್ಷ್ಯ ಸಾಬೀತಾದರೆ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.