ಶಿವಮೊಗ್ಗ : ಶಿವಮೊಗ್ಗದಲ್ಲಿ ಖಾಸಗಿ ಸ್ಲೀಪರ್ ಬಸ್‌ವೊಂದು ಧಗಧಗನೆ ಹೊತ್ತಿ ಉರಿದಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಹೊಸನಗರ ತಾಲೂಕಿನ ಅರಸಾಳು ಹಾಗೂ ಸೂಡೂರು ಗೇಟ್ ಬಳಿ ಈ ಘಟನೆ ನಡೆದಿದೆ. ಚಾಲಕ, ಕ್ಲೀನರ್ ಸೇರಿದಂತೆ 40 ಮಂದಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಎಲ್ಲರೂ ಸೇಫ್ ಆಗಿದ್ದಾರೆ.
ಅನ್ನಪೂರ್ಣೇಶ್ವರಿ ಟ್ರಾವೆಲ್ಸ್ ಹೆಸರಿನ ಖಾಸಗಿ ಸ್ಲೀಪರ್ ಬಸ್ ಹೊಸನಗರ ತಾಲೂಕಿನ ನಿಟ್ಟೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ನಿಟ್ಟೂರಿನಿಂದ ಅರಸಾಳು ಬಳಿ ಬರುತ್ತಿದ್ದಂತೆ ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಬಸ್ ಎಂಜಿನ್ ಬಳಿ ಹೊಗೆ ಕಾಣಿಸಿಕೊಂಡು, ಒಮ್ಮೆಲೆ ಬೆಂಕಿ ಹೊತ್ತಿ ಉರಿದಿದೆ. ಬೆಂಕಿ ಕಾಣಿಸಿಕೊಂಡಾಗ ಬಸ್ ಅನ್ನು ಡ್ರೈವರ್ ಸಂಪೂರ್ಣ ಬಲಭಾಗಕ್ಕೆ ತಿರುಗಿಸಿದ್ದಾರೆ. ಇದರಿಂದ ರಸ್ತೆ ಪಕ್ಕದ ಮರಕ್ಕೆ ಬಸ್ ಡಿಕ್ಕಿಯಾಗಿದೆ.
ತಕ್ಷಣವೇ ತುರ್ತು ನಿರ್ಗಮನ, ಡೋರ್ ಹಾಗೂ ವಿಂಡೋ ಮೂಲಕ ಪ್ರಯಾಣಿಕರು ಹೊರಬಂದಿದ್ದಾರೆ. ಅವಘಡದಲ್ಲಿ ಬಸ್ ಡ್ರೈವರ್ ಹಾಗೂ ಕ್ಲೀನರ್‌ಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ಬಸ್‌ನಿಂದ ಹೊರಬರುವ ವೇಳೆ 5-6 ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸ್ಥಳಕ್ಕೆ ರಿಪ್ಪನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.















