ಮನೆ ರಾಜ್ಯ ಹಾಲು ಕರೆಯುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ: ಪ್ರಥಮ ಬಹುಮಾನ – ಆನೇಕಲ್ ರಾಮಚಂದ್ರ ರೆಡ್ಡಿ

ಹಾಲು ಕರೆಯುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ: ಪ್ರಥಮ ಬಹುಮಾನ – ಆನೇಕಲ್ ರಾಮಚಂದ್ರ ರೆಡ್ಡಿ

0

ಮೈಸೂರು: ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ್ದಂತಹ ಸ್ಪರ್ಧಿಗಳಿಗೆ ನೆರೆದಿದ್ದಂತಹ ಜನರು ಸಿಳ್ಳೆ, ಕೇಕೆ ಮತ್ತು ಚಪ್ಪಾಳೆಗಳ ಮೂಲಕ ಪ್ರೋತ್ಸಾಹಿಸಿದರು.

Join Our Whatsapp Group

ಇಂದು ಮೈಸೂರು ದಸರಾ ಮಹೋತ್ಸವ-2024 ರ ಅಂಗವಾಗಿ ರೈತ ದಸರಾ ಉಪ ಸಮಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ‘ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ಮತ್ತು ವಿಜೇತರಿಗೆ ಬಹುಮಾನವನ್ನು ಶಾಸಕರುಗಳಾದ ಕೆ.ಹರೀಶ್ ಗೌಡ ಹಾಗೂ ಡಿ.ರವಿಶಂಕರ್ ಅವರಿಂದ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಅವರು, ಕಳೆದ ವರ್ಷಗಳಿಂದ ಕೇವಲ 50,000 ಮತ್ತು 30,000 ಮಾತ್ರ ಬಹುಮಾನ ನೀಡುತ್ತಿದ್ದು, ಆದರೆ ಈ ಬಾರಿ ನಮ್ಮ ಸರ್ಕಾರ ಪ್ರಥಮ ಬಹುಮಾನಕ್ಕೆ ಒಂದು ಲಕ್ಷ, ದ್ವಿತೀಯ ಬಹುಮಾನಕ್ಕೆ 80,000 ಸಾವಿರ, ತೃತೀಯ ಬಹುಮಾನಕ್ಕೆ 60,000, ಹಾಗೂ ಕೊನೆಯ ಬಹುಮಾನಕ್ಕೆ 40,000 ರೂಗಳನ್ನು ನೀಡಲು ತೀರ್ಮಾನಿಸಿ ಅದರಂತೆ ಬಹುಮಾನಗಳನ್ನು ನೀಡಲಾಗಿದೆ ಎಂದರು.

ನಮ್ಮ ಮೈಸೂರು ಗ್ರಾಮಾಂತರ ಪ್ರದೇಶದ ಜನರು ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ. ಇವರು ಕೃಷಿ ಜೊತೆಗೆ ಹೈನುಗಾರಿಕೆ ಮೇಲೆ ಹೆಚ್ಚಾಗಿ ಅವಲಂಭಿಸಿದ್ದು ಇನ್ನೂ ನಗರ ಪ್ರದೇಶದಲ್ಲಿ ಬರಿ ಹೈನುಗಾರಿಕೆ ಮಾಡುವುದು ನಾವು ಕಾಣಬಹುದಾಗಿದೆ ಎಂದರು.

ಎಚ್.ಡಿ ಕೋಟೆ ಹೈನುಗಾರಿಕೆ ಮಾಡುವವರು ಅನಾವಶ್ಯಕವಾಗಿ ಹಸುಗಳನ್ನು ಬಿಡಾರಕ್ಕೆ ಬಿಡುತ್ತಾರೆ. ಅವು ಬೀದಿ ಸುತ್ತಾಡಿಕೊಂಡು ಮನೆಗೆ ವಾಪಸ್ ಬರುವಂಥದ್ದು ನಾವು ನೋಡಿದ್ದೇವೆ. ಅದೇ ರೀತಿ ನಮ್ಮ ಮೈಸೂರಿನಲ್ಲಿಯೂ ಹೆಚ್ಚಿನ ಸಂಖ್ಯೆಯ ಹಸುಗಳಿದ್ದು, ಅಂತಹ ಹಸುಗಳಿಗೆ ಕಾರ್ಪೊರೇಷನ್ ಅವರು 2 ರಿಂದ 3 ಸಾವಿರ ದಂಡ ವಿಧಿಸುತ್ತಾರೆ. ಅದನ್ನು ನಿಲ್ಲಿಸಬೇಕು ಎಂದು ಆತಂಕ ವ್ಯಕ್ತಪಡಿಸಿದರು.

ಹೈನುಗಾರಿಕೆ ಜೊತೆಗೆ ನಿಮ್ಮ ಜೀವನವನ್ನು ಬದಲಾಯಿಸಿಕೊಳ್ಳಬೇಕು ಇವತ್ತಿನ ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಕೆಲವೊಂದು ಉಪ ಕಸುಬುಗಳನ್ನು ಮಾಡುವುದು ಪ್ರತಿಯೊಬ್ಬರೂ ಕಲಿಯಬೇಕು ಎಂದು ಕಿವಿ ಮಾತು ಹೇಳಿದರು.

ಕೆ.ಆರ್. ನಗರ ಕ್ಷೇತ್ರದ ಶಾಸಕರಾದ ಡಿ.ರವಿಶಂಕರ್ ಅವರು ಮಾತನಾಡಿ, ಅಂತಿಮ ಸ್ಫರ್ಧೆಗಳು ಇಂದು ನಡೆದಿವೆ. ಸರಿ ಸುಮಾರು 40 ಲೀಟರ್ ಗಿಂತ ಹೆಚ್ಚು ಹಾಲನ್ನು ಕರೆಯುವ ಹಸುಗಳು ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲಾ ರೈತರಿಗೂ ವೈಯಕ್ತಿಕವಾಗಿ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ನಮ್ಮ ಮೈಸೂರು ದಸರಾ ಇಡೀ ವಿಶ್ವಕ್ಕೆ ಪ್ರಸಿದ್ಧಿಯಾಗಿದೆ. ಕಳೆದ ಬಾರಿ ಸರಿಯಾದ ರೀತಿಯಲ್ಲಿ ಮಳೆ, ಬೆಳೆ ಇಲ್ಲದ ಕಾರಣ ನಮ್ಮ ರೈತರು ಬಹಳ ಸಂಕಷ್ಟಕ್ಕೆ ಸಿಲುಕಿದರು. ಅದರ ಪರಿಣಾಮ, ದಸರಾವನ್ನು ಸಾಂಪ್ರದಾಯಿಕವಾಗಿ ನಡೆಸಲಾಯಿತು. ಆದರೆ ಈ ಬಾರಿಯ ದಸರಾದಲ್ಲಿ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಹಾಗೂ ವರುಣದೇವನ ಅನುಗ್ರಹದಿಂದ ಉತ್ತಮ ಮಳೆ ಬೆಳೆಯಾಗಿ ಹಸಿರು ವಾತಾವರಣ ಮೂಡಿದೆ ಎಂದರು.

ಈ ಭಾಗದ ರೈತರು ಹೆಚ್ಚಾಗಿ ಕೃಷಿ ಚಟುವಟಿಕೆಗಳನ್ನು ಮಾಡಲು ಮುಂದಾಗಿದ್ದಾರೆ. ನಮ್ಮದು ಕೃಷಿ ಪ್ರಧಾನ ದೇಶವಾಗಿದ್ದು, ಶೇಕಡ 70 ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ನಮ್ಮ ಸರ್ಕಾರ ಹಾಗೂ ಸಚಿವರುಗಳು ಎಂದಿಗೂ ರೈತರ ಪರವಾಗಿದ್ದಾರೆ. ಆದ್ದರಿಂದ ದಸರಾ ಮಹೋತ್ಸವದಲ್ಲಿ ರೈತ ದಸರಾವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇಂದು ಹಾಲು ಕರೆಯುವ ಸ್ಪರ್ಧೆಯಲ್ಲಿ ಸುಮಾರು 40 ಲೀಟರ್ ಹಾಲು ಕರೆಯುವ ಜಾನುವಾರುಗಳನ್ನು ನೋಡುವ ಭಾಗ್ಯ ನನಗೆ ಲಭಿಸಿತು. ಇದೇ ರೀತಿ ಮುಂದೆಯೂ ಸಹ ಇಂಥ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನಗಳನ್ನು ಪಡೆದು ಇಡೀ ರಾಜ್ಯ ಹಾಗೂ ದೇಶಕ್ಕೆ ನಮ್ಮ ರೈತರು ಮಾದರಿಯಾಗಬೇಕು ಎಂದು ಹೇಳಿದರು.

ಇನ್ನಷ್ಟು ಉತ್ತಮ ಮಳೆ, ಬೆಳೆಯಾಗುವ ಮೂಲಕ ರೈತರ ಸಬಲೀಕರಣವಾಗಲಿ ಎಂದು ತಾಯಿ ಚಾಮುಂಡೇಶ್ವರಿಯನ್ನು ಕೋರುವ ಮೂಲಕ ಶುಭ ಹಾರೈಸಿದರು.

ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ
ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ 8 ಹಸುಗಳು ಭಾಗವಹಿಸಿದ್ದು, ಒಟ್ಟು 20 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಅದರಲ್ಲಿ ಇಂದು ಬೆಳಿಗ್ಗೆ ಮತ್ತು ಸಂಜೆ ಅಂತಿಮ ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ನಡೆಸಲಾಗಿತ್ತು. ಸ್ಪರ್ಧೆಯಲ್ಲಿ ಹೆಚ್ಚಿನ ಪ್ರಮಾಣದ ಹಾಲನ್ನು ಕರೆದ ಸ್ಪರ್ಧಿಗೆ ಪ್ರಶಸ್ತಿ ನೀಡಲಾಯಿತು.

ಆನೇಕಲ್ ತಾಲ್ಲೂಕಿನ ಕಗ್ಗಲೀಪುರದ ತನಿಷ್ ಪಾರಂ ಡೈರಿಯ ರಾಮಚಂದ್ರ ರೆಡ್ಡಿ – ಬೆಳಗ್ಗೆ ಮತ್ತು ಸಂಜೆ ಎರಡೂ ಸೇರಿ – 42.840 ಲೀ ಹಾಲು ಕರೆಯುವ ಮೂಲಕ 1 ಲಕ್ಷ ರೂ ನಗದು ಗಳಿಸಿಕೊಂಡು‌ ಪ್ರಥಮ ಸ್ಥಾನ ಪಡೆದುಕೊಂಡರು.

ಚನ್ನರಾಯಪಟ್ಟಣ ತಾಲ್ಲೂಕಿನ ತೋಟಿ ಗ್ರಾಮದ ಬಾಬು ಬಿನ್ ರೇವಣ್ಣ ಅವರು ಬೆಳಗ್ಗೆ ಮತ್ತು ಸಂಜೆ ಎರಡೂ ಸೇರಿ – 42.300 ಲೀ ಹಾಲು ಕರೆಯುವ ಮೂಲಕ ದ್ವಿತೀಯ ಸ್ಥಾನ ಗಳಿಸಿ 80 ಸಾವಿರ ರೂ ನಗದು ಹಣ ಪಡೆದುಕೊಂಡರು.

ಆನೇಕಲ್ ತಾಲ್ಲೂಕಿನ ವೆಟ್ ಫಾರಂ, ನಕುಂದಿ, ದೊಮ್ಮಸಂದ್ರ, ಅಜಯ್.ಪಿ ರೆಡ್ಡಿ ಅವರ ಹಸು ಬೆಳಗ್ಗೆ ಮತ್ತು ಸಂಜೆ ಎರಡೂ ಸೇರಿ – 41.300 ಲೀ ಕರೆಯುವ ಮೂಲಕ ತೃತೀಯ ಸ್ಥಾನ ಗಳಿಸಿ 60 ಸಾವಿರ ನಗದು ಪಡೆದುಕೊಂಡರು.

ಎಚ್ ಡಿ ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದ AGM ಡೈರಿ ಫಾರಂ ದೇವರಾಜ್ ಅವರ ಹಸು ಬೆಳಗ್ಗೆ ಮತ್ತು ಸಂಜೆ ಎರಡೂ ಸೇರಿ – 40.580 ಲೀ ಕರೆಯುವ ಮೂಲಕ ನಾಲ್ಕನೇ ಸ್ಥಾನ ಪಡೆದುಕೊಂಡು 40 ಸಾವಿರ ನಗದು ಹಣ ಪಡೆದುಕೊಂಡರು.

ಈ ಸಂದರ್ಭದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡ ವಿಜೇತರಿಗೆ ನಗದು ಬಹುಮಾನ ಜೊತೆಗೆ ಹಾಲಿನ ಕ್ಯಾನ್, ಟ್ರೋಫಿ, ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಿ. ಉಳಿದ ಎಲ್ಲಾ ಸ್ಪರ್ಧಿಗಳಿಗೂ ಹಾಲಿನ ಕ್ಯಾನ್ ನೀಡುವ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರೈತ ದಸರಾ ಉಪ ಸಮಿತಿಯ ಉಪ ವಿಶೇಷಾಧಿಕಾರಿಯಾದ ಡಾ.ಕೃಷ್ಣರಾಜು, ಮುಖಂಡರಾದ ಬಿ.ಜೆ ವಿಜಯಕುಮಾರ್, ರೈತ ದಸರಾ ಉಪ ಸಮಿತಿಯ ಉಪಾಧ್ಯಕ್ಷರಾದ ಮಂಜುನಾಥ್ , ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಗೋಪಿ , ರೈತ ದಸರಾ ಉಪ ಸಮಿತಿ ಸದಸ್ಯರುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.