ಮೈಸೂರು: ಹೈದರಾಬಾದ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿತ ಅಪರಾಧಿ ನೂರುದ್ದೀನ್ ಅಲಿಯಾಸ್ ರಫಿ ಎಂಬಾತನನ್ನು ಬಂಧಿಸಿದೆ.
ನೂರುದ್ದೀನ್ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ, ಈತನನ್ನು ಮೈಸೂರಿನ ರಾಜೀವ್ ನಗರದಲ್ಲಿ ಬಂಧಿಸಲಾಗಿದೆ. ನೂರುದ್ದೀನ್ ಮೇಲೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಬುಧವಾರ ಖಚಿತ ಆಧಾರದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ರಾಜೀವ್ ನಗರದ ಆತನ ಮನೆಯಲ್ಲೇ ಹೆಡೆಮುರಿ ಕಟ್ಟಿದ್ದಾರೆ. ಮನೆಯಲ್ಲಿದ್ದ ಆತನ ಮೊಬೈಲ್ ಫೋನ್, ಲ್ಯಾಪ್ ಟಾಪ್, ಪೆನ್‌ಡ್ರೈವ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನೂರುದ್ದೀನ್ 2023ರ ಆಗಸ್ಟ್‌ನಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ, ಚೆನ್ನೈನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ನೂರುದ್ದೀನ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇದೀಗ ನೂರುದ್ದೀನ್ ಎನ್ಐಎ ತಂಡದ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೇ 7, 2024 ರಂದು, ನ್ಯಾಯಾಲಯವು ಅವನನ್ನು ಘೋಷಿತ ಅಪರಾಧಿ ಎಂದು ಘೋಷಿಸಿತು.
ಹತ್ತು ವರ್ಷಗಳ ಹಿಂದೆ ಅಂದರೆ 2014 ರಲ್ಲಿ ಬೆಂಗಳೂರಿನ ಇಸ್ರೇಲ್ ಹಾಗೂ ಚೆನ್ನೈನ ಅಮೆರಿಕಾ ರಾಯಭಾರ ಕಚೇರಿಗಳ ಮೇಲೆ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪ ಆತನ ಮೇಲಿದೆ. ಇದೇ ಆರೋಪದ ಮೇಲೆ ಶ್ರೀಲಂಕಾ ಪ್ರಜೆ ಮೊಹಮ್ಮದ್ ಸಕೀರ್ ಹುಸೇನ್ ಹಾಗೂ ಕೊಲಂಬೊದ ಪಾಕಿಸ್ತಾನದ ರಾಜತಾಂತ್ರಿಕ ಕಚೇರಿ ನೌಕರರಾಗಿರುವ ಪಾಕಿಸ್ತಾನದ ಪ್ರಜೆ ಅಮೀರ್ ಜುಬೇರ್ ಸಿದ್ದಿಕಿಯನ್ನು ಎನ್ಐಎ ಅಧಿಕಾರಿಗಳು 2014ರಲ್ಲಿ ಬಂಧಿಸಿದ್ದರು. ಆ ಆರೋಪಿಗಳಿಗೆ ಭಾರತದ ನಕಲಿ ನೋಟು ಪೂರೈಸುವ ಮೂಲಕ ಭಯೋತ್ಪಾದಕ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ನೂರುದ್ದೀನ್ ವಿರುದ್ಧವೂ ಪ್ರಕರಣ ದಾಖಲಿಸಿದ್ದರು
ಆರೋಪಿ ಪಾಕಿಸ್ತಾನಿ ಪ್ರಜೆಯ ಆದೇಶದ ಮೇರೆಗೆ, ಈ ಕೃತ್ಯಕ್ಕೆ ಅಗತ್ಯವಾದ ಹಣವನ್ನು ನೂರೂದ್ದೀನ್ ನಕಲಿ ನೋಟು ಚಲಾವಣೆಯ ಮೂಲಕ ನೀಡಿದ್ದ. ನೂರುದ್ದೀನ್ ಭಾರತೀಯ ಕರೆನ್ಸಿ ನೋಟುಗಳನ್ನು ಬಳಸಿಕೊಂಡು ದೇಶವಿರೋಧಿ ಬೇಹುಗಾರಿಕೆ ಚಟುವಟಿಕೆಗಳಿಗೆ ಹಣಕಾಸು ಒದಗಿಸುವಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಎನ್ಐಎ ತನಿಖೆಗಳು ಬಹಿರಂಗಪಡಿಸಿವೆ.