ಬೆಂಗಳೂರು (Bengaluru)-ಜೈಲು ವಾಸಿಗಳಿಗೆ ಕೆಲವೇ ದಿನಗಳಲ್ಲಿ ʻವೃತ್ತಿಪರ ಐಟಿಐ ಶಿಕ್ಷಣ ಭಾಗ್ಯʼ ದೊರೆಯಲಿದೆ. ಹೌದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವವರು ಮುಂದೆ ಗೌರವಯುತ ಜೀವನ ಕಟ್ಟಿಕೊಳ್ಳಲು ಸಹಾಯವಾಗುವಂತೆ ವೃತ್ತಿಪರ ಶಿಕ್ಷಣ ನೀಡಲು ಚಿಂತನೆ ನಡೆಸಲಾಗಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ’ಐಟಿಐ’ ಕಾಲೇಜು ಸ್ಥಾಪಿಸುವ ಪ್ರಸ್ತಾವನೆಯನ್ನು ರಾಜ್ಯ ಕಾರಾಗೃಹ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರದಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ‘ಐಟಿಐ’ ಕಾಲೇಜು ಸ್ಥಾಪನೆ ಮಂಜೂರು ಪ್ರಕ್ರಿಯೆ ನಡೆದಿದ್ದು, ಕೆಲವೇ ತಿಂಗಳಲ್ಲಿ ಜೈಲು ಹಕ್ಕಿಗಳಿಗೂ ಐಟಿಐ ಶಿಕ್ಷಣ ಭಾಗ್ಯ ದೊರೆಯಲಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ಜೈಲಿನಲ್ಲಿ ಕಾಲೇಜು ಪ್ರಾರಂಭವಾದರೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಜೈಲಿನಲ್ಲಿ ಕಾಲೇಜು ಸ್ಥಾಪಿಸಿದ ಹೆಗ್ಗಳಿಕೆಗೆ ಸರ್ಕಾರ ಪಾತ್ರವಾಗಲಿದೆ.
ಉದ್ದೇಶಿತ ಐಟಿಐ ಕಾಲೇಜು ಸರ್ಕಾರಿ ಕಾಲೇಜಿನ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ಮೊದಲ ಹಂತದಲ್ಲಿ 6 ತಿಂಗಳ ಅಲ್ಪಾವಧಿ ಕೋರ್ಸ್, ಎರಡು ವರ್ಷಗಳ ವೃತ್ತಿ ಶಿಕ್ಷಣ ಸಂಬಂಧಿ ಕೋರ್ಸ್‌ಗಳನ್ನು (ಐಟಿಐ, ಎಲೆಕ್ಟ್ರಾನಿಕ್ಸ್) ಆರಂಭಿಸಲಾಗುತ್ತದೆ. ಕೋರ್ಸ್ ಪೂರ್ಣಗೊಳಿಸಿದವರಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಎರಡು ವರ್ಷಗಳ ಕೋರ್ಸ್‌ಗೆ ಕನಿಷ್ಟ 8ನೇ ತರಗತಿ ಪಾಸಾಗಿರಬೇಕು ಎಂಬ ಮಾನದಂಡ ನಿಗದಿಪಡಿಸಲಾಗಿದೆ ಎಂದು ಕಾರಾಗೃಹ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.
ಮಂಗಳೂರಿನಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಐಟಿಐ ಕಾಲೇಜು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲಾಗಿದೆ. ಅದೇ ಕಾಲೇಜನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸ್ಥಳಾಂತರಿಸುವ ಚಿಂತನೆ ಗೃಹ ಇಲಾಖೆ ಮುಂದಿದೆ.
ಜೈಲಿನಲ್ಲಿರು ಖೈದಿಗಳ ಪೈಕಿ ವಿದ್ಯಾವಂತರೂ ಇದ್ದಾರೆ. ಬಹುತೇಕರು ಎಸ್ಸೆಸ್ಸೆಲ್ಸಿ, ಪಿಯುಸಿ ಡ್ರಾಪ್‌ಔಟ್‌ಗಳು ಕೂಡ ಇದ್ದಾರೆ. ವಿಚಾರಣಾಧೀನ ಖೈದಿಗಳು ಜಾಮೀನು ಸಿಗದೆ ಕನಿಷ್ಠ ಎರಡು ವರ್ಷ ಜೈಲಲ್ಲಿ ಇರಲಿದ್ದಾರೆ. ಈ ಅವಧಿಯಲ್ಲಿ ಅವರ ಶಿಕ್ಷಣ ಪೂರೈಸುವ ಅವಕಾಶ ಸಿಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಈಗಾಗಲೇ ಜೈಲಿನಲ್ಲಿರುವ ನೂರಾರು ಮಂದಿ ಖೈದಿಗಳಿಗೆ ಮೇ ಮೊದಲ ವಾರದಿಂದ ರುಡ್‌ಸೆಟ್ ಸಂಸ್ಥೆಯ ಸಹಯೋಗದಲ್ಲಿ ಪ್ಲಂಬಿಂಗ್ ತರಬೇತಿ ಕೊಡಿಸಲಾಗುತ್ತಿದೆ. 24 ಮಂದಿ ಸಜಾ ಖೈದಿಗಳಿಗೆ ಕಟ್ಟಡಗಳಿಗೆ ಪೇಂಟಿಂಗ್ ಬಳಿಯುವ ತರಬೇತಿ ಕೊಡಿಸಲಾಗಿದೆ ಎಂದು ಅಧಿಕಾರಿ ಹೇಳಿದರು.