ಬೆಂಗಳೂರು : ವೀಕ್ ಡೇಸ್‌ನಲ್ಲಿ ಫ್ರೊಫೆಸರ್, ವೀಕೆಂಡ್ ನಲ್ಲಿ ಖರ್ತನಾಕ್ ಕಳ್ಳಿಯಾಗಿ ಬದಲಾಗುತ್ತಿದ್ದ ಐನಾತಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಕ್ಕ ಸಿಕ್ಕ ಕಲ್ಯಾಣ ಮಂಟಪ ಪ್ರವೇಶಿಸಿ ಮದುವೆ ಮನೆಯಲ್ಲಿ ಚೆನ್ನಾಗಿ ತಿಂದು, ಚಿನ್ನಾಭರಣ ದೋಚಿ ಹೋಗುತ್ತಿದ್ದ, ಪ್ರೊಫೆಸರ್ ರೇವತಿಯನ್ನು ಬಸವನಗುಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಶಿವಮೊಗ್ಗ ಮೂಲದ ರೇವತಿ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ವಾಸವಾಗಿದ್ದಳು. ಬೆಳ್ಳಂದೂರು ಬಳಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಫ್ರೊಫೆಸರ್ ಆಗಿರುವ ಆರೋಪಿ ವಾರಪೂರ್ತಿ ಪಾಠ ಮಾಡುತ್ತಿದ್ದಳು. ಆದರೆ ಭಾನುವಾರ ಮಾತ್ರ ಸಂಬಂಧಿಕರ ರೀತಿಯಲ್ಲಿ ಮದುವೆ ಕಲ್ಯಾಣ ಮಂಟಪ ಪ್ರವೇಶಿಸುತ್ತಿದ್ದಳು.
ಅನುಮಾನ ಬಾರದಂತೆ ಎಲ್ಲರನ್ನೂ ಮಾತಾಡಿಸುತ್ತಿದ್ದ ಈಕೆ ಚಿನ್ನಾಭರಣವನ್ನು ಕದಿಯುತ್ತಿದ್ದಳು. ನಂತರ ಮದುವೆ ಊಟ ಮಾಡಿಕೊಂಡು ಪರಾರಿಯಾಗುತ್ತಿದ್ದಳು. ಕಳೆದ ನವೆಂಬರ್ 25 ರಂದು ಬಸವನಗುಡಿಯ ದ್ವಾರಕನಾಥ್ ಕಲ್ಯಾಣಮಂಟಪದಲ್ಲಿ ಈಕೆ ಸಂಬಂಧಿಕರ ರೀತಿ ತೆರಳಿ ಮದುವೆ ಮನೆಯವರ ಚಿನ್ನಾಭರಣ ಕದ್ದಿದ್ದಳು.
ಬೆಂಗಳೂರನ್ನು ರೌಂಡ್ಸ್ ಹಾಕುತ್ತಿದ್ದ ಈಗೆ ಮದುವೆ ಇರುವ ಹಾಲ್‌ಗಳಿಗೆ ಪ್ರವೇಶ ಮಾಡುತ್ತಿದ್ದಳು. ಬಸವನಗುಡಿ ಪೊಲೀಸರ ವಿಚಾರಣೆ ವೇಳೆ ಮೂರು ಕಳವು ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತಳಿಂದ 32 ಲಕ್ಷ ರೂ. ಮೌಲ್ಯದ 262 ಗ್ರಾಂ ಚಿನ್ನಾಭರಣ ಹಾಗೂ ನಗದನ್ನು ವಶಕ್ಕೆ ಪಡೆಯಲಾಗಿದೆ. ಬೇರೆ ಬೇರೆ ಕಲ್ಯಾಣಮಂಟಪದಲ್ಲಿ ಇದೇ ರೀತಿ ಈಕೆ ಕೃತ್ಯ ಎಸಗಿರುವ ಸಾಧ್ಯತೆ ಇದ್ದು ಪೊಲೀಸರು ಆಕೆಯನ್ನು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.














