ಮಂಗಳೂರು: ಮಾರ್ಬಲ್ ವ್ಯವಹಾರದಲ್ಲಿ ಲಾಭ ಮಾಡಿಕೊಡುವುದಾಗಿ ನಂಬಿಸಿ 2.50 ಕೋಟಿ ರೂ. ಹೂಡಿಕೆ ಮಾಡಿಸಿ ವಂಚಿಸಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಮ್ಮದ್ ಶರೀಫ್ ಎಲ್. ಪ್ರಕರಣದ ಆರೋಪಿ. ಈತ ಎಂ. ನಾಸೀರ್ ಅವರಿಗೆ ವಂಚಿಸಿದ್ದಾಗಿ ದೂರಲಾಗಿದೆ.
ರಾಜಸ್ತಾನದಿಂದ ಮಾರ್ಬಲ್ ತಂದು ಕಾಸರಗೋಡಿನಲ್ಲಿ ವ್ಯಾಪಾರ ಮಾಡುತ್ತೇನೆ. ಅದರಲ್ಲಿ ಹೂಡಿಕೆ ಮಾಡಿದರೆ ಲಾಭ ಕೊಡುತ್ತೇನೆ ಎಂದು ಎಂ.ನಾಸೀರ್ ಅವರನ್ನು ಶರೀಫ್ ನಂಬಿಸಿದ್ದ. ನಾಸೀರ್ ಅವರಿಂದ ಹಂತ ಹಂತವಾಗಿ ಒಟ್ಟು 2.50 ಕೋ.ರೂ.ಗಳನ್ನು ನಗದಾಗಿ ಪಡೆದುಕೊಂಡಿದ್ದ. ಹಣ ಪಡೆದುಕೊಂಡ ಬಗ್ಗೆ ದಾಖಲಾತಿ ಕೇಳಿದಾಗ ತಾವಿಬ್ಬರು ಒಂದೇ ಊರಿನವರಾಗಿದ್ದು ದಾಖಲಾತಿಯನ್ನು ಮುಂದಕ್ಕೆ ಯಾವುದಾದರೂ ಮಾಡಬಹುದು ಎಂದು ಹೇಳಿದ್ದ.
ಮೂರು ತಿಂಗಳು ಕಳೆದ ಬಳಿಕ ವ್ಯಾಪಾರ ಲೆಕ್ಕ ಮಾಡಿ ಲಾಭ ಮತ್ತು ದಾಖಲಾತಿಯನ್ನು ಒಟ್ಟಿಗೆ ಕೊಡುವುದಾಗಿಯೂ ನಂಬಿಸಿದ್ದ. ನಾಸೀರ್ ಅವರು ಬಳಿಕ ಅಬುಧಾಬಿಗೆ ತೆರಳಿದ್ದು, ಆಗಾಗ್ಗೆ ಫೋನ್ ಮಾಡಿ ಹಣದ ಬಗ್ಗೆ ವಿಚಾರಿಸಿದ್ದರು. ಅನಂತರ ಊರಿಗೆ ಬಂದು ಆರೋಪಿಯ ಮನೆಗೆ ಹೋಗಿ ಹಣ ಕೇಳಿದಾಗ ನೀಡಿರಲಿಲ್ಲ. ಬಳಿಕ ಅವಾಚ್ಯ ಶಬ್ದಗಳಿಂದ ಬೈದು, ಜೀವಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.