ಮನೆ ಸ್ಥಳೀಯ ರಾತ್ರಿ ಹತ್ತು ಆದರೂ ಪ್ರಗತಿ ಪರಿಶೀಲನೆ ಸಭೆ: ಅಧಿಕಾರಿಗಳಿಗೆ ಬೆವರಿಳಿಸಿದ ಸಿಎಂ ಸಿದ್ದರಾಮಯ್ಯ

ರಾತ್ರಿ ಹತ್ತು ಆದರೂ ಪ್ರಗತಿ ಪರಿಶೀಲನೆ ಸಭೆ: ಅಧಿಕಾರಿಗಳಿಗೆ ಬೆವರಿಳಿಸಿದ ಸಿಎಂ ಸಿದ್ದರಾಮಯ್ಯ

0

ಮೈಸೂರು: ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು. ಸರ್ಕಾರದ 5 ಗ್ಯಾರೆಂಟಿ ಯೋಜನೆಗಳಿಗೆ ವಾರ್ಷಿಕ 56 ಸಾವಿರ ಕೋಟಿ ಹಣವನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.

Join Our Whatsapp Group

ಶುಕ್ರವಾರ ರಾತ್ರಿ 10 ಗಂಟೆವರೆಗೂ ನಡೆದ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್​ ವತಿಯಿಂದ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್​ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾವು 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇಲ್ಲಿಯವರೆಗೆ 300 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. 1.23 ಕೋಟಿ ಕುಟುಂಬಗಳು ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2000ರೂ ಪಡೆಯುತ್ತಿದ್ದಾರೆ. ಒಂದು ವರ್ಷದಲ್ಲಿ 56 ಸಾವಿರ ಕೋಟಿವರೆಗೆ ಪ್ರತಿ ವರ್ಷ ಗ್ಯಾರೆಂಟಿ ಯೋಜನೆಗಳಿಗೆ ಖರ್ಚು ಆಗುತ್ತಿದೆ. ಈ ವರ್ಷ ಬಜೆಟ್​ನಲ್ಲಿ 50 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ. ಉಳಿದ ಹಣವನ್ನು ಪೂರಕ ಬಜೆಟ್​ನಲ್ಲಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಬಜೆಟ್​ನಲ್ಲಿ ಘೋಷಣೆ ಆಗಿರುವ ಅಬಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನದ ಕೊರತೆ ಇಲ್ಲ. ಆರ್ಥಿಕ ವರ್ಷದಲ್ಲಿ ಇನ್ನೂ 6 ತಿಂಗಳು ಮಾತ್ರ ಬಾಕಿ ಇದೆ. ಕ್ರಿಯಾ ಯೋಜನೆ ಆಗದೆ ಇರುವನ್ನು ಈಗಲೇ ಕ್ರಿಯಾಯೋಜನೆ ಮಾಡಿಕೊಳ್ಳಿ. ಅಧಿಕಾರಿಗಳು ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮೈಸೂರು ಸಾಂಸ್ಕೃತಿಕ ನಗರಿ. ಇಲ್ಲಿ ಪ್ರತಿ ವರ್ಷ ದಸರಾ ಆಚರಣೆ ಮಾಡಲಾಗುತ್ತಿದೆ. ಹಿಂದೆ ಮೈಸೂರು ಮಹಾರಾಜರು ಆಚರಣೆ ಮಾಡುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ ಸರ್ಕಾರವೇ ಆಚರಣೆ ಮಾಡುತ್ತಿದೆ. ಕಳೆದ ವರ್ಷ ಬರಗಾಲ ಇತ್ತು, ಆದ್ದರಿಂದ ಸರಳ ದಸರಾ ಆಚರಣೆಯ ಮಾಡಲಾಗಿತ್ತು. ಈ ಬಾರಿ ಉತ್ತಮ ಮಳೆ ಬೆಳೆ ಆಗಿದೆ ಆದ್ದರಿಂದ ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ಹಾಗೆಂದು ದುಂದು ವೆಚ್ಚ ಮಾಡಬಾರದು. ಇದು ಜನರ ಉತ್ಸವ. ನಮ್ಮ ನಾಡಿನ ಸಂಸ್ಕೃತಿ ಪರಂಪರೆಯನ್ನು ಸಾರುವಂತೆ ದಸರಾ ಆಚರಣೆ ಮಾಡಬೇಕು. ದಸರಾ ನೆಪ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷ ಮಾಡಬಾರದು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದರು.

ಅಧಿಕಾರಿಗಳು ಜನರ ಕೆಲಸವನ್ನು ಕಾನೂನು ರೀತಿಯಲ್ಲಿ ಸರಳವಾಗಿ ಮಾಡಿಕೊಡಬೇಕು. ಜನರನ್ನು ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಅಲೆಸಬಾರದು. ಅಧಿಕಾರಿಗಳು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅತಿ ಪ್ರಮುಖ. ಉತ್ತಮ ಶಿಕ್ಷಣ, ಆರೋಗ್ಯ, ಉತ್ತಮ ರಸ್ತೆಗಳು, ಕುಡಿಯುವ ನೀರಿನ ಪೂರೈಕೆ, ಕೃಷಿ ಸೌಲಭ್ಯಗಳನ್ನು ಅಧಿಕಾರಿಗಳು ಒದಗಿಸಬೇಕು ಎಂದು ಆದೇಶಿಸಿದರು.

ಕರ್ನಾಟಕದಲ್ಲಿ 34 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಅನ್ನು ಉತ್ಪಾದನೆ ಮಾಡುತ್ತೇವೆ. ನಮ್ಮ ಬಳಕೆಗಿಂತ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ವಿದ್ಯುತ್​​ನ ಕೊರತೆ ಇಲ್ಲ. ಅಧಿಕಾರಿಗಳು ಹಾಗೂ ರಾಜಕಾರಣಿಗಳಲ್ಲಿ ಜಾತಿಯ ಸೋಂಕು ಇರಬಾರದು. ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂವಿಧಾನದ ಪೀಠಿಕೆಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಇದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಪಠಣ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.

ಕೃಷಿ ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳಲ್ಲಿ ಅದಷ್ಟೋ ಶೀಘ್ರವಾಗಿ ಪರಿಹಾರ ವಿತರಣೆ ಮಾಡಬೇಕು. ಪರಿಹಾರಕ್ಕೆ ಆಯ್ಕೆ ಮಾಡುವಾಗ ಅನಗತ್ಯ ದಾಖಲೆಗಳನ್ನು ಕೇಳಬಾರದು. ರೈತರು ಉತ್ತಮ ಬೆಳೆ ಬೆಳೆದು ಆದಾಯಗಳಿಸಲು ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಮಾಹಿತಿ ನೀಡಬೇಕು ಎಂದರು.

ಕೃಷಿ ಇಲಾಖೆ: ಮುಂಗಾರು, ಪೂರ್ವ ಮುಂಗಾರು ಕೃಷಿ ಚಟುವಟಿಕೆ ಪ್ರಮಾಣದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ಜಂಟಿ ಕೃಷಿ ನಿರ್ದೇಶಕರು ತಾಲ್ಲೂಕುವಾರು ಬಿತ್ತನೆ ಮಾಹಿತಿ ನೀಡಿ ವಾಡಿಕೆಗಿಂತ ಕೃಷಿ ಚಟುವಟಿಕೆ ಕಡಿಮೆ ಆಗಿಲ್ಲ ಎಂದರು. ಬಳಿಕ ಮುಖ್ಯಮಂತ್ರಿಗಳು, “ಜಿಲ್ಲೆಯಲ್ಲಿ ಕೃಷಿಗೆ ಯಾವುದಾದರೂ ರೋಗ ತಗುಲಿದೆಯೇ? ಔಷಧ, ಗೊಬ್ಬರ ರೆಡಿ ಇದೆಯೇ” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಕೃಷಿ ಬೆಳೆಗೆ ರೋಗ ತಗುಲಿಲ್ಲ. ಔಷಧ, ಗೊಬ್ಬರ ಅಗತ್ಯವಿದ್ದಷ್ಟು ಸಂಗ್ರಹ ಇದೆ ಎಂದರು.

ಜತೆಗೆ ಮಾಧ್ಯಮಗಳಲ್ಲಿ ವರದಿ ಆಗಿರುವ ರೈತರ ಸಾವು ಮತ್ತು ಬೆಳೆ ಹಾನಿ ವರದಿಗಳನ್ನು ನಿರ್ಲಕ್ಷಿಸಬೇಡಿ. ವರದಿಗಳ ಸತ್ಯಾಸತ್ಯತೆ ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ. ಮಹದೇವಪ್ಪ ಮತ್ತು ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಯ ಡೈರಿ-ಫೋಟೋ ಕೇಳಿದ ಸಿಎಂ: ಕೃಷಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ರೈತರ ಜಮೀನುಗಳಲ್ಲಿ ಪರಿಶೀಲನೆ ನಡೆಸಬೇಕು. ರೈತರ ಸಭೆಗಳನ್ನು ನಡೆಸಬೇಕು. ಇದನ್ನೆಲ್ಲಾ ನೀವು ಮಾಡಿದ್ದೀರಾ ಎಂದು ಸಿಎಂ ಪ್ರಶ್ನಿಸಿದರು. ಈ ವೇಳೆ ಕೃಷಿ ಅಧಿಕಾರಿ ತಾವು ಗ್ರಾಮ ಭೇಟಿ ನೀಡಿದ್ದ ಡೈರಿಯನ್ನು ಸಿಎಂಗೆ ನೀಡಿದರು. ಸಿಎಂ ಡೈರಿ ಪರಿಶೀಲಿಸಿದರು. ಸಮಾಧಾನ ಆಗಲಿಲ್ಲ. ನೀವು ಭೇಟಿ ನೀಡಿದ ಫೋಟೋಗಳನ್ನು ತೋರಿಸಿ ಎಂದರು. ಅಧಿಕಾರಿಗಳು ತಾವು ಭೇಟಿ ನೀಡಿದ್ದ ಫೋಟೋಗಳನ್ನು ಪ್ರದರ್ಶಿಸಿದರು.

ಆದರೂ ಸಮಾಧಾನ ಆಗದ ಮುಖ್ಯಮಂತ್ರಿಗಳು, ರೈತರ ಜಮೀನುಗಳಿಗೆ ಭೇಟಿ ನೀಡಿದಾಗ ರೈತರಿಗೆ ಹೆಚ್ಚು ತಿಳುವಳಿಕೆ ಇದೆಯಾ? ನಿಮಗೆ ಹೆಚ್ಚು ತಿಳುವಳಿಕೆ ಇದೆಯಾ ಗೊತ್ತಾಯ್ತಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಪ್ರಾಕ್ಟಿಕಲ್ ಆಗಿ ರೈತರು ಬುದ್ಧಿವಂತರಿರುತ್ತಾರೆ. ನಾವು ಅವರಿಂದ ಕಲಿಯುತ್ತೇವೆ ಎಂದು ಹೇಳಿದರು.

ರೇಷ್ಮೆ ಇಲಾಖೆ: ಒಂದು ಕಾಲದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಹೆಚ್ಚು ಬೆಳೆಯುತ್ತಿದ್ದರು. ಬಹಳಷ್ಟು ರೈತರು ಇದರ ಮೇಲೆ ಅವಲಂಭಿತರಾಗಿದ್ದರು. ಈಗ ನಮ್ಮ ಸಿದ್ದರಾಮನಹುಂಡಿಯಲ್ಲಿ ಯಾರೂ ರೇಷ್ಮೆ ಬೆಳೆಯುತ್ತಿಲ್ಲ ಏಕೆ ? ರೇಷ್ಮೆ ಬೆಳೆಗಾರರು ಏಕೆ ಕಡಿಮೆ ಆಗಿದ್ದಾರೆ ಎಂದು ಸಿಎಂ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ಹೌದು ಸಾರ್, ಸಿದ್ದರಾಮನಹುಂಡಿಯಲ್ಲಿ ಕೇವಲ ಇಬ್ಬರು ಮಾತ್ರ ರೇಷ್ಮೆ ಬೆಳೆಯುತ್ತಿದ್ದಾರೆ ಎಂದು ಉತ್ತರಿಸಿದರು.

ಪಶು ಸಂಗೋಪನಾ ಇಲಾಖೆ: ಸಿಎಂ, ಹಸು ಸಾಕಾಣಿಕಾರರು ಮೊದಲು ಹಾಲನ್ನು ತಾವು ಕುಡಿದು, ತಮ್ಮ ಮಕ್ಕಳಿಗೂ ಕುಡಿಸಿ ಹೆಚ್ಚುವರಿ ಹಾಲನ್ನು ಮಾರಾಟ ಮಾಡಬೇಕು. ಆಗ ಮಾತ್ರ ಅವರಿಗೂ ಆರೋಗ್ಯಕರ ಹಾಲು ಸಿಗುತ್ತದೆ ಎಂದರು. ಆದ್ದರಿಂದ ಈ ಬಗ್ಗೆ ರೈತರಲ್ಲಿ, ರೈತರ ಮಕ್ಕಳಲ್ಲಿ ಹಾಲು ಕುಡಿಯಲು ಜಾಗೃತಿ ಮೂಡಿಸಿ ಎಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.

ಮೀನುಗಾರಿಕಾ ಇಲಾಖೆ: ರಾಜ್ಯದಲ್ಲಿ ಎಷ್ಟು ಮಂದಿ ಮತ್ತು ಎಷ್ಟು ಕುಟುಂಬಗಳು ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿವೆ ಎನ್ನುವ ಮಾಹಿತಿ ನಿಮ್ಮಲ್ಲಿ ಇದೆಯೇ ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳು ಪ್ರಶ್ನಿಸಿ, ಅವರೆಲ್ಲರಿಗೂ ಸರ್ಕಾರದ ಕಾರ್ಯಕ್ರಮಗಳು ಗೊತ್ತಿದೆಯಾ? ಎಲ್ಲರಿಗೂ ಸರ್ಕಾರದ ಸವಲತ್ತುಗಳು ತಲುಪುತ್ತಿದೆಯಾ ಎಂದು ಸಿ.ಎಂ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು 25988 ಮಂದಿ , 11314 ಕುಟುಂಬಗಳು ಮೀನುಗಾರಿಕೆಯನ್ನೇ ಅವಲಂಭಿಸಿ ಬದುಕಿದ್ದಾರೆ. ಎಲ್ಲರಿಗೂ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸಿ ತಲುಪಿಸಲಾಗುತ್ತಿದೆ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ: ಅನ್ನಭಾಗ್ಯ ಯೋಜನೆ ಎಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪುತ್ತಿದೆ, ಬಿಪಿಎಲ್ ಪಡಿತರ ಚೀಟಿಗಳು, ನಕಲಿ ಪಡಿತರ ಚೀಟಿಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ನೀವು ಜನರ ಬಳಿಗೆ ಹೋದಾಗ ಜನ ಅಕ್ಕಿ ಬೇಕು ಅಂತಿದ್ದಾರೋ, ಹಣ ಬೇಕು ಅಂತಿದ್ದಾರೋ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಡಿಬಿಟಿ ಮೂಲಕ ನೇರವಾಗಿ ಅವರ ಖಾತೆಗೆ ಹಣ ಹೋಗುವುದನ್ನು ಹೆಚ್ಚಿನ ಜನರು ಬಯಸುತ್ತಿದ್ದಾರೆ. ಹೀಗಾಗಿ ಡಿಬಿಟಿ ಮೂಲಕ ಮುಂದುವರೆಸುವುದು ಉತ್ತಮ. ಹಾಗೆಯೇ ಡಿಬಿಟಿ ಯೋಜನೆಯಿಂದಾಗಿ ಕಾಳ ಸಂತೆಯನ್ನು ಅಕ್ಕಿ ಮಾರಿಕೊಳ್ಳುವ ಪ್ರಸಂಗಗಳಿಗೂ ಬ್ರೇಕ್ ಬೀಳುತ್ತದೆ. ಹಣ ಕೈಗೆ ಸಿಕ್ಕರೆ ಇತರೆ ಪದಾರ್ಥ, ಔಷಧಿಗೆ ಆ ಹಣವನ್ನು ಬಳಸಿಕೊಳ್ಳಬಹುದು ಎನ್ನುವ ಅಭಿಪ್ರಾಯ ಹೆಚ್ಚಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: ಬಡವರಿಗೆ, ನಿಜವಾದ ಅರ್ಹರಿಗೆ ಅನುಕೂಲ ಆಗುವ ಎನ್ನುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳು, ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದ್ದರಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನರ್ಹರು ಯೋಜನೆಯ ದುರುಪಯೋಗ ಪಡೆಯದಂತೆ, ಅರ್ಹರಿಗೆ ಅನ್ಯಾಯ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಖಡಕ್ಕಾಗಿ ಸೂಚನೆ ನೀಡಿದರು.

ಯುವ ನಿಧಿ: ಯುವ ನಿಧಿ ಪಡೆಯುತ್ತಿರುವ ಪ್ರತಿಯೊಬ್ಬರು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರಗಳಲ್ಲಿ ತೊಡಗಿಸಕೊಳ್ಳಬೇಕು. ಅವರ ಕೌಶಲ್ಯ ಅಭಿವೃದ್ಧಿಯಾಗಿ ಉದ್ಯೋಗ ಸಿಗುವಂತಾಗಬೇಕು. ಈ ಬಗ್ಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಿಗಾ ವಹಿಸಬೇಕು ಎಂದು ಸಿಎಂ ಆದೇಶಿಸಿದರು.