ಮೈಸೂರು: ವಿವಿಧ ಯೋಜನೆಗಳಿಂದ ರಾಜ್ಯಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ವಾಪಸ್ ಆಗದಂತೆ ನಿಗದಿತ ದಿನದೊಳಗೆ ಪೂರ್ಣಗೊಳಿಸಬೇಕು. ಅನುದಾನ ಬಳಕೆ ಮಾಡದಿದ್ದಲ್ಲಿ ಇಲಾಖೆಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನಗಳು ಖರ್ಚು ಮಾಡಬೇಕು. ಇದುವರೆಗೆ ಆರಂಭಿಸದೆ ಇರುವ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಬೇಕು. ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದರೆ ಅವುಗಳನ್ನು ಮುಗಿಸಬೇಕು ಎಂದು ಹೇಳಿದರು.
ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಕೇಂದ್ರ,ರಾಜ್ಯವಲಯದಿಂದ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನ,ಖರ್ಚು ಮತ್ತು ಖರ್ಚು ಮಾಡಲು ಟೆಂಡರ್ ಹಂತದಲ್ಲಿರುವ ಕಾಮಗಾರಿಗಳ ವಿವರ ನೀಡಿದರು.ಡಿಡಿಪಿಐ ಜವರೇಗೌಡಮಾತನಾಡಿ, ಜಿಲ್ಲೆಯ ೪೯ ಹೈಸ್ಕೂಲ್‌ಗಳಿಗೆ ಸ್ಮಾರ್ಟ್‌ಕ್ಲಾಸ್ ಸೌಲಭ್ಯಗಳನ್ನುಒದಗಿಸಲು ೧.೫೮ ಕೋಟಿ ರೂ.ವೆಚ್ಚದ ಟೆಂಡರ್ ಕರೆದಿದ್ದು, ಜನವರಿ ಅಂತ್ಯದೊಳಗೆ ಖರ್ಚು ಮಾಡುತ್ತೇವೆ. ಹೆಚ್ಚುವರಿ ನಿರ್ಮಾಣದ ಕಾಮಗಾರಿಗಳಿಗೆ ಪಂಚಾಯತ್‌ರಾಜ್ ಇಲಾಖೆಗೆ ಅನುದಾನ ಕೊಡಲಾಗಿದೆ. ಅವರು ಕಾಮಗಾರಿ ಆರಂಭಿಸಬೇಕಿದೆ ಎಂದು ಸಭೆಯ ಗಮನಕ್ಕೆ ತಂದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ೧೪ ವಿದ್ಯಾರ್ಥಿನಿಲಯಗಳ ಕಾಮಗಾರಿ ಶುರುವಾಗಿದ್ದು, ೨೯ ಲಕ್ಷ ವೆಚ್ಚದಲ್ಲಿ ಕೆಲವು ರಿಪೇರಿ ಕಾಮಗಾರಿ ಶುರು ಮಾಡಲಾಗಿದೆ. ಆಯುಷ್ ಇಲಾಖೆ ವತಿಯಿಂದ ಮೂರು ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಕಾರ್ಯಪಾಲಕ ಅಭಿಯಂತರರು ಮಾತನಾಡಿ, ಕೊರೊನಾ ಬಂದ ಮೇಲೆ ಎಸ್‌ಆರ್ ದರವನ್ನು ಹೆಚ್ಚಿನ ಮಟ್ಟದಲ್ಲಿ ಹಾಕುತ್ತಿದ್ದಾರೆ. ಹೊಸ ಗುತ್ತಿಗೆದಾರರು ವಹಿವಾಟು ತೋರಿಸಬೇಕಿರುವ ಕಾರಣ ಹೆಚ್ಚಿನ ಮಟ್ಟದಲ್ಲಿ ನಮೂದಿಸುತ್ತಿದ್ದಾರೆ. ಹಳೆಯ ಗುತ್ತಿಗೆದಾರರಿಂದ ಈ ಸಮಸ್ಯೆ ಇಲ್ಲ. ಹೊಸದಾಗಿ ಕಾಮಗಾರಿ ಮಾಡಲಿರುವವರು ಈ ರೀತಿಯಲ್ಲಿ ಮಾಡುತ್ತಿದ್ದಾರೆ. ಹಾಗಾಗಿ,ಮರು ಟೆಂಡರ್‌ಗಳನ್ನು ಕರೆಯುವಂತಾಗಿದೆ ಎಂದು ತಿಳಿಸಿದರು.
೩೦೦ಎಂಎಲ್‌ಡಿ ಸಂಸ್ಕರಣಾ ಘಟಕ: ಮೈಸೂರು ನಗರದಲ್ಲಿ ೩೦೦ ಎಂಎಲ್‌ಡಿ ಮಲೀನ ನೀರು ಸಂಸ್ಕರಣಾ ಘಟಕವನ್ನು ನಿರ್ಮಾಣಮಾಡುವ ಬಗ್ಗೆ ಡಿಪಿಆರ್ ತಯಾರಾಗುತ್ತಿದೆ. ವಿಶ್ವಬ್ಯಾಂಕ್ ನೆರವಿನಿಂದ ಯೋಜನೆಕಾರ್ಯಗತಗೊಳಿಸುವ ಕುರಿತು ಚರ್ಚಿಸಲಾಗುತ್ತಿದೆ. ಮೈಸೂರು ನಗರದಲ್ಲಿ ಪ್ರತಿನಿತ್ಯ ೫೫೦ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು,ಈಗ ೧೫೦ ಟನ್ ಸಂಸ್ಕರಣೆ ಮಾಡಲಾಗುತ್ತಿದೆ. ಹಸಿ ಮತ್ತು ಒಣ ಕಸವನ್ನು ಶೇ.೯೦ರಷ್ಟು ಸಂಗ್ರಹಿಸುತ್ತಿರುವುದರಿಂದ ಸಂಸ್ಕರಣೆ ಮಾಡಲು ಸಮಸ್ಯೆಯಾಗಿಲ್ಲ ಎಂದು ನಗರಪಾಲಿಕೆ ಆಯುಕ್ತ ಆಸಾದ್ ಉರ್‌ರೆಹಮಾನ್ ಷರೀಫ್ ಹೇಳಿದರು.
ನಗರಕ್ಕೆ ಪ್ರಸ್ತುತ ೩೨೦ ಎಂಎಲ್‌ಡಿ ನೀರು ಸರಬರಾಜು ಆಗುತ್ತಿದ್ದು, ೨೨೦-೨೩೦ ಎಂಎಲ್‌ಡಿ ನೀರು ವಿತರಣೆ ಮಾಡಲಾಗುತ್ತಿದೆ. ಈಗ ಐದು ವಾರ್ಡುಗಳಿಗೆ ದಿನದ ೨೪ಗಂಟೆಗಳ ಕಾಲ ನೀರನ್ನು ಒದಗಿಸುತ್ತಿದ್ದೇವೆ. ಉಳಿದ ವಾರ್ಡುಗಳಿಗೆ ವಾರದ ಏಳು ದಿನಗಳ ಕಾಲವೂ ನೀರು ಪೂರೈಕೆ ಮಾಡಲು ೨೬೦ಕೋಟಿ ರೂ.ವೆಚ್ಚದ ಡಿಪಿಆರ್ ತಯಾರಾಗುತ್ತಿದೆ. ಈ ಯೋಜನೆ ಕಾರ್ಯಗತವಾದರೆ ಮುಂದಿನ ೨-೩ವರ್ಷಗಳಲ್ಲಿ ದಿನದ ೨೪ಗಂಟೆಗಳ ಕಾಲ ನೀರು ಪೂರೈಸಬಹುದು ಎಂದು ವಿವರಿಸಿದರು.
ಕೃಷಿಹೊಂಡ ನಿರ್ಮಾಣಕ್ಕೆ ಹಿಂದೇಟು: ಕೃಷಿ ಹೊಂಡ ನಿರ್ಮಾಣಕ್ಕೆ ಶೇ.೪೦ರಷ್ಟು ಸಬ್ಸಿಡಿ ನೀಡುತ್ತಿರುವುದರಿಂದ ರೈತರು ಹಿಂದೇಟು ಹಾಕುತ್ತಿದ್ದಾರೆ. ಬೇರೆ ಬೇರೆ ಯೋಜನೆಗಳಲ್ಲಿ ಶೇ.೭೦, ಶೇ.೮೦ರಷ್ಟು ಸಬ್ಸಿಡಿ ಇದೆ. ಕೃಷಿ ಹೊಂಡಕ್ಕೆ ಶೇ.೪೦ರಷ್ಟು ಮಾತ್ರ ಸಬ್ಸಿಡಿ ಕೊಡುವುದರಿಂದ ರೈತರು ಹೊರೆ ಭರಿಸದೆ ಒಲವು ತೋರುತ್ತಿಲ್ಲ. ಹೊಂಡದ ಸುತ್ತಲೂ ತಂತಿಬೇಲಿಯನ್ನು ನಿರ್ಮಾಣ ಮಾಡಬೇಕಿರುವ ಕಾರಣ ಆರ್ಥಿಕ ಹೊರೆಯ ಮಾತನ್ನಾಡುತ್ತಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಹೇಳಿದರು. ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ೫೧ ಹೆಕ್ಟೇರ್ ಪ್ರದೇಶವು ಮಳೆಯಿಂದ ಹಾನಿಗೀಡಾಗಿದೆ. ಬಿತ್ತನೆ,ರಸಗೊಬ್ಬರದ ಸಮಸ್ಯೆ ಇಲ್ಲ ಎಂದು ತಿಳಿಸಿದರು.
೨ಎಕರೆ ಜಾಗಕ್ಕೆ ಪ್ರಸ್ತಾವನೆ: ಜಿಲ್ಲೆಯಲ್ಲಿ ರೇಷ್ಮೆ ಗೂಡು ಉತ್ಪಾದನೆ ಮಾಡುವವರ ಪ್ರಮಾಣ ಹೆಚ್ಚಾಗುತ್ತಿದ್ದು, ಪ್ರತಿನಿತ್ಯ ೨-೩ಟನ್ ಗೂಡು ಮಾರುಕಟ್ಟೆಗೆ ಬರುತ್ತಿದೆ. ೫ಟನ್ ಗೂಡು ಬಂದಾಗ ಜಾಗದ ಸಮಸ್ಯೆ ಆಗುವ ಕಾರಣ ಪ್ರತ್ಯೇಕ ಎರಡು ಜಾಗ ಕೊಡುವಂತೆ ಬಂಡೀಪಾಳ್ಯ ಎಪಿಎಂಸಿಗೆ ಪತ್ರ ಬರೆಯಲಾಗಿದೆ. ಇಲಾಖೆಯ ಆಯುಕ್ತರಿಂದಲೂ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಉಪ ನಿರ್ದೇಶಕರು ಹೇಳಿದರು.
ಈ ವೇಳೆ ಇದಕ್ಕೆ ಪ್ರತಿಕ್ರಿಯಿಸಿ ಎಪಿಎಂಸಿ ಅಧಿಕಾರಿ, ಬಂಡೀಪಾಳ್ಯದಲ್ಲಿರುವ ೮೬ ಎಕರೆ ಪ್ರದೇಶವನ್ನು ಪೂರ್ಣವಾಗಿ ಬಳಕೆ ಮಾಡಲಾಗಿದೆ. ಹೊಸದಾಗಿ ಮುರು ಎಕರೆಯಲ್ಲಿ ಏಳೆನೀರು ಘಟಕ, ಹವಾನಿಯಂತ್ರಿತ ಘಟಕ, ಘನತ್ಯಾಜ್ಯ ನಿರ್ವಹಣಾ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ, ಜಾಗದ ಕೊರತೆ ಇದೆ ಎಂದು ಹೇಳಿದರು.
ಇದನ್ನು ಪರಿಗಣಿಸಿದ ಜಿಲ್ಲಾ ಉಸ್ತುವಾರಿಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಬಂಡೀಪಾಳ್ಯದ ಸುತ್ತಮುತ್ತಲ ಪ್ರದೇಶದಲ್ಲಿ ಎರಡು ಎಕರೆ ಜಾಗವನ್ನು ಗುರುತಿಸಿ. ಜಿಲ್ಲಾಡಳಿತದಿಂದಲೂ ಅಗತ್ಯವಿರುವ ಕಡೆ ಸ್ಥಳ ಪರಿಶೀಲಿಸಿ ಗುರುತು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ.ಬಸವರಾಜು, ಜಿಲ್ಲೆಯಲ್ಲಿ ೨೫೦೦ ಅಂಗನವಾಡಿ ಕೇಂದ್ರಗಳಿದ್ದು,ಸರ್ಕಾರದ ಸೂಚನೆಯಂತೆ ಪೌಷ್ಠಿಕಾಂಶದ ಪದಾರ್ಥಗಳನ್ನು ವಿತರಿಸಲಾಗುತ್ತಿದೆ. ಶಿಥಿಲಗೊಂಡಿರುವ ಅಂಗನವಾಡಿ ಕಟ್ಟಡಗಳ ರಿಪೇರಿ,ಹೊಸ ಅಂಗನವಾಡಿ ಕೇಂದ್ರಗಳ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಮೇವುದಾಸ್ತಾನಿಗೆ ಖರೀದಿ: ಮುಂದಿನ ಬೇಸಿಗೆ ದಿನಗಳಲ್ಲಿ ಮೇವಿನ ಕೊರತೆ ಉಂಟಾಗದಂತೆ ಜಿಲ್ಲೆಗೆ ಅಗತ್ಯವಿರುವ ೧೧,೨೯೮ ಸಾವಿರ ಮೇವಿನ ಕಿಟ್‌ಗಳನ್ನು ಖರೀದಿಸಿದ್ದು, ಕಿಟ್ ಬಂದ ತಕ್ಷಣ ಎಲ್ಲಾ ತಾಲ್ಲೂಕುಗಳಲ್ಲಿ ಸಂಗ್ರಹಿಸಿ ದಾಸ್ತಾನು ಮಾಡಲಾಗುತ್ತದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕರು ಹೇಳಿದರು. ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಬಂದಿದ್ದು,ಜಾನುವಾರು ಗಣತಿ ಮುಂದುವರಿದಿದೆ. ಈಗ ಮೇವಿನ ಸಮಸ್ಯೆ ಇರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ೯೦ ದಿನಗಳಿಗೆ ಅಗತ್ಯವಿರುವಷ್ಟು ಖರೀದಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಹೈನುಗಾರಿಕೆ ಚೆನ್ನಾಗಿರುವ ಕಾರಣ ಹಾಲು ಉತ್ಪಾದನೆ ಪ್ರತಿನಿತ್ಯ ೧೦ ಲಕ್ಷ ಲೀಟರ್ ದಾಟಿದ್ದು,೪.೫೦ ಲಕ್ಷ ಮಾರಾಟವಾಗುತ್ತಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ೫೦ಸಾವಿರ ಲೀಟರ್ ಹೆಚ್ಚು ಉತ್ಪಾದನೆಯಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಹಾಜರಿದ್ದರು. ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಉಪ ವಿಭಾಗಾಧಿಕಾರಿ ಕೆ.ಆರ್.ರಕ್ಷಿತ್, ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಗ್ರಾಮೀಣಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಎ.ಎಸ್.ರಂಜಿತ್‌ಕುಮಾರ್, ಜಿಲ್ಲಾ ಆರ್‌ಸಿಎಚ್ ಜಯಂತ್, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಅಭಿಯಂತರ ತಿಪ್ಪಾರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಘವೇಂದ್ರ, ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ಮಲ್ಲೇಶ್ ಮತ್ತಿತರರು ಪಾಲ್ಗೊಂಡು ತಮ್ಮ ಇಲಾಖೆಯ ಪ್ರಗತಿಯ ಕುರಿತು ವಿವರಣೆ ನೀಡಿದರು.
ಮೈಸೂರಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್,ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಹಾಜರಿದ್ದರು.