ನವದೆಹಲಿ: ನಿಷೇಧಿತ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್’ಐ) ಸಂಘಟನೆಯ ಕಾನೂನು ಬಾಹಿರ ಚಟುವಟಿಕೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್’ಐಎ) ಶನಿವಾರ ರಾಜಸ್ಥಾನದ ಏಳು ಸ್ಥಳಗಳಲ್ಲಿ ಶೋಧ ನಡೆಸಿದೆ.
ಕೋಟಾ ಜಿಲ್ಲೆಯಲ್ಲಿ ಮೂರು ಕಡೆ ಮತ್ತು ಮಾಧೋಪುರ, ಬಿಲ್ ವಾಢ, ಬುಂಧಿ ಮತ್ತು ಜೈಪುರ ಜಿಲ್ಲೆಗಳ ತಲಾ ಒಂದು ಕಡೆ ಶಂಕಿತರ ಮನೆ ಹಾಗೂ ವ್ಯಾಪಾರ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಡಿಜಿಟಲ್ ಉಪಕರಣ, ಏರ್ ಗನ್, ಹರಿತವಾದ ಆಯುಧ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ಪಿಎಫ್’ಐ ಕಾರ್ಯಕರ್ತರಾದ ಬರಾನ್’ನ ಸಾದಿಕ್ ಸರಾಫ್ ಮತ್ತು ಕೋಟಾದ ಮೊಹಮ್ಮದ್ ಆಸಿಫ್ ವಿರುದ್ಧ ಕಳೆದ ವರ್ಷ ಸೆಪ್ಟೆಂಬರ್ 19ರಂದು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.