ಮನೆ ರಾಜ್ಯ ನವೀಕರಿಸಬಹುದಾದ ಇಂಧನ ವಲಯದ ಸ್ಟಾರ್ಟ್ಅಪ್‌ಗಳ ಉತ್ತೇಜನ: ಸೌತ್ ವೇಲ್ಸ್ ವಿ.ವಿ. ಜತೆ ಇಂಧನ ಇಲಾಖೆ ಒಪ್ಪಂದ

ನವೀಕರಿಸಬಹುದಾದ ಇಂಧನ ವಲಯದ ಸ್ಟಾರ್ಟ್ಅಪ್‌ಗಳ ಉತ್ತೇಜನ: ಸೌತ್ ವೇಲ್ಸ್ ವಿ.ವಿ. ಜತೆ ಇಂಧನ ಇಲಾಖೆ ಒಪ್ಪಂದ

0

ಸಿಡ್ನಿ:  ನವೀಕರಿಸಬಹುದಾದ ಇಂಧನ ವಲಯದ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಿ, ಅಭಿವೃದ್ಧಿಪಡಿಸಲು ಆಸ್ಟ್ರೇಲಿಯಾದ ಸೌತ್ ವೇಲ್ಸ್ ವಿಶ್ವವಿದ್ಯಾಲಯದೊಂದಿಗೆ ಇಂಧನ ಇಲಾಖೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ.

Join Our Whatsapp Group

ರಾಜ್ಯ ಇಂಧನ ಇಲಾಖೆಯ ಪ್ರತಿನಿಧಿಯಾಗಿ ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಹಾಗೂ  ಸೌತ್ ವೇಲ್ಸ್‌ ವಿ.ವಿ.ಯ ಉಪಕುಲಪತಿ ಪ್ರೊಫೆಸರ್ ಕಾಲಿನ್ ಗ್ರಾಂಟ್  ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.  ನವೀಕರಿಸಬಹುದಾದ ಇಂಧನ ವಲಯದ ತಂತ್ರಜ್ಞಾನ ಮತ್ತು ಸ್ಟಾರ್ಟ್ಅಪ್‌ ಪರಿಸರದ ಅಭಿವೃದ್ಧಿಗೆ ಇದು ಪೂರಕವಾಗಲಿದೆ.

ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುವ ಆಸ್ಟ್ರೇಲಿಯಾ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (ಎಐಬಿಸಿ) ಬೆಂಬಲದೊಂದಿಗೆ

ಕ್ರೆಡಲ್‌ ಮತ್ತು ಸೌತ್ ವೇಲ್ಸ್ ವಿ.ವಿ  ನಡುವಿನ ಈ ಒಪ್ಪಂದ ಸಾಧ್ಯವಾಗಿದ್ದು, 5 ವರ್ಷಗಳವರೆಗೆ ಇದು ಜಾರಿಯಲ್ಲಿರುತ್ತದೆ.  ಪರಸ್ಪರ ಒಪ್ಪಿಗೆಯೊಂದಿಗೆ ಒಪ್ಪಂದ ವಿಸ್ತರಣೆಗೂ ಅವಕಾಶ ಇರಲಿದೆ.

“ಕರ್ನಾಟಕ ಮತ್ತು ಸೌತ್ ವೇಲ್ಸ್ ವಿಶ್ವವಿದ್ಯಾಲಯ ನಡುವಿನ ಈ  ಒಪ್ಪಂದ ಮಹತ್ವದ ಮೈಲಿಗಲ್ಲಾಗಿದ್ದು, ನವೀಕರಿಸಬಹುದಾದ ಇಂಧನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗಳಿಗೆ  ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ. ಅಲ್ಲದೇ, ಈ ಮೂಲಕ ಆಸ್ಟ್ರೇಲಿಯಾದ ಜತೆಗಿನ ಕರ್ನಾಟಕದ ಬಾಂಧವ್ಯವನ್ನು ಹೆಚ್ಚಲಿದೆ. ಮುಖ್ಯವಾಗಿ ರಾಜ್ಯದಲ್ಲಿ  ಹೊಸ ಹೂಡಿಕೆ ಅವಕಾಶಗಳು ಹೆಚ್ಚಲಿವೆ.”

 ಕೆ.ಜೆ. ಜಾರ್ಜ್, ಇಂಧನ ಸಚಿವರು

“ಈ ಒಪ್ಪಂದ ಪತ್ರ ರಾಜ್ಯದ ನವೀಕರಿಸಬಹುದಾದ ಇಂಧನ ವಲಯದಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಯುನಿವರ್ಸಿಟಿ ಆಫ್ ಸೌತ್ ವೇಲ್ಸ್‌ ಜತೆಗಿನ ಒಪ್ಪಂದವು ಈ ವಲಯದ  ಸಾಮರ್ಥ್ಯ ವರ್ಧನೆ ಮತ್ತು ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುವ ಸ್ಟಾರ್ಟ್ಅಪ್‌ಗಳಿಗೆ ಪೂರಕ ಪರಿಸರ ಕಲ್ಪಿಸಲಿದೆ. ಸಂಶೋಧನೆ ಮತ್ತು ಆವಿಷ್ಕಾರ ವಲಯಕ್ಕೆ ಸಂಬಂಧಿಸಿದ ಪರಿಣಿತಿಯನ್ನು ಆಸ್ಟ್ರೇಲಿಯಾ ನಮ್ಮ ಜತೆ ಹಂಚಿಕೊಳ್ಳುವುದರಿಂದ  ಜಾಗತಿಕ ಮಟ್ಟದ ಪರಿಸರ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಹಾಕಿಕೊಂಡಿರುವ ನಮ್ಮ ಗುರಿಗೆ ನೆರವಾಗಲಿದೆ.  ಉದ್ಯಮಗಳು, ಸರ್ಕಾರ ಮತ್ತು ನಾಗರಿಕರಿಗೆ ಇದು ಲಾಭದಾಯಕವಾಗಲಿದೆ” ಎಂದು ಇಂಧನ ಸಚಿವಾಲಯದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ  ತಿಳಿಸಿದ್ದಾರೆ.

“ ಕ್ರೆಡಲ್‌ ಪರವಾಗಿ, ಸೌತ್ ವೇಲ್ಸ್  ವಿ.ವಿ ಜತೆಗಿನ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹೊಸ ತಂತ್ರಜ್ಞಾನಗಳ ಆವಿಷ್ಕಾರ ಹಾಗೂ ಬಳಕೆಯ ದೃಷ್ಟಿಯಿಂದ ಒಪ್ಪಂದ ಹೆಚ್ಚಿನ ಮಹತ್ವ ಪಡೆಯುತ್ತದೆ.  ಬಂಡವಾಳ ಹೂಡಿಕೆ ಮತ್ತು ನವೀನ ತಂತ್ರಜ್ಞಾನದ ವಾಣಿಜ್ಯೀಕರಣದ ಅವಕಾಶಗಳನ್ನು ಅನ್ವೇಷಿಸುವುದು ನಮ್ಮ ಗುರಿಯಾಗಿದೆ,” ಎಂದು ಕ್ರೆಡಲ್‌  ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ವಿವರಿಸಿದ್ದಾರೆ.

ಸಭೆಯಲ್ಲಿ ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಗೌರವ್‌ ಗುಪ್ತಾ, ಶಾಸಕರೂ ಆದ ಕ್ರೆಡಲ್‌ ಅಧ್ಯಕ್ಷ ಟಿ.ಡಿ. ರಾಜೇಗೌಡ, ಕ್ರೆಡಲ್‌ ಅಧ್ಯಕ್ಷ ಕೆ.ಪಿ. ರುದ್ರಪ್ಪಯ್ಯ, ಇಂಧನ ಸಚಿವರ ಆಪ್ತ ಕಾರ್ಯದರ್ಶಿ ಸತೀಶ್‌, ಯುಎನ್‌ಎಸ್‌ಡಬ್ಲ್ಯೂದ ಪ್ರೊಫೆಸರ್‌ ವಿನಾಯಕ್‌ ದೀಕ್ಷಿತ್‌, ಆಸ್ಟ್ರೇಲಿಯಾ ಇಂಡಿಯಾ ಬಿಸಿನೆಸ್ ಕೌನ್ಸಿಲ್‌ನ ಅಧ್ಯಕ್ಷ ಇರ್ಫಾನ್ ಮಲಿಕ್ ಉಪಸ್ಥಿತರಿದ್ದರು.