ಕೆಎಎಸ್ ವೃಂದದಿಂದ ಐಎಎಸ್ ವೃಂದಕ್ಕೆ ಬಡ್ತಿ ನೀಡುವ ವಿಚಾರವಾಗಿ ಕೇಂದ್ರ ಆಡಳಿತ ನ್ಯಾಯ ಮಂಡಳಿ (ಸಿಎಟಿ) ಆದೇಶ ಪಾಲಿಸಲಾಗಿಲ್ಲ ಎಂದು ಆರೋಪಿಸಿ ರಾಜ್ಯದ ಆರು ಮಂದಿ ಐಎಎಸ್ ಅಧಿಕಾರಿಗಳ ವಿರುದ್ಧ ಸಿಎಟಿ ಮುಂದಿರುವ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದಿನ ಆದೇಶದವರೆಗೆ ಯಾವುದೇ ನಿರ್ಣಯ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೇ ಈ ಪ್ರಕರಣದಲ್ಲಿ ಹಿಂದೆ ನೀಡಲಾಗಿರುವ ಮಧ್ಯಂತರ ಆದೇಶವನ್ನೂ ವಿಸ್ತರಿಸಲಾಗಿದೆ.
ಕೆಎಎಸ್ ಅಧಿಕಾರಿ ನಿವೃತ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರ ಪ್ರಕರಣದಲ್ಲಿ ಸಿಎಟಿ ನೀಡಿರುವ ಬಹುಮತದ ತೀರ್ಪು ಹಾಗೂ ತಮ್ಮ ವಿರುದ್ಧದ ನಿಂದನಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿಗಳಾದ ಸುಭಾಷ್ ಕುಂಟಿಯಾ, ಪಿ ರವಿಕುಮಾರ್, ವಂದಿತಾ ಶರ್ಮಾ ಹಾಗೂ ಹಿಂದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹೊಣೆಗಾರಿಕೆ ನಿಭಾಯಿಸಿದ್ದ ಟಿ ಕೆ ಅನಿಲ್ ಕುಮಾರ್, ಪಿ ಹೇಮಲತಾ, ಎಂ ಎಸ್ ಶ್ರೀಕರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಸಿ ಎಂ ಜೋಷಿ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸತು.
ಅರ್ಜಿ ಪರಿಶೀಲಿಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರು ತಾವು ಈ ಹಿಂದೆ ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದಾಗ ಇಂತಹ ಅನೇಕ ಪ್ರಕರಣಗಳಲ್ಲಿ ಹಾಜರಾಗಿದ್ದಿದೆ. ಹಾಗಾಗಿ ಈ ಅರ್ಜಿಯು ನನ್ನ ಹೊರತಾದ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಲಿ. ಈ ಸಂಬಂಧ ಮುಖ್ಯ ನ್ಯಾಯಮೂರ್ತಿಗಳಿಂದ ಸೂಕ್ತ ನಿರ್ದೇಶನ ಪಡೆದು ಸಂಬಂಧಪಟ್ಟ ಪೀಠದ ಮುಂದೆ ಈ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಬೇಕು ಎಂದು ರಿಜಿಸ್ಟ್ರಿಗೆ ನಿರ್ದೇಶನ ನೀಡಿದರು. ಇದೇ ವೇಳೆ ಅರ್ಜಿದಾರರ ಪರ ವಕೀಲರ ಮನವಿಯಂತೆ ಹೈಕೋರ್ಟ್‌ನ ಮುಂದಿನ ಆದೇಶದವರೆಗೆ ಈ ಪ್ರಕಣದಲ್ಲಿ ಸಿಎಟಿ ಯಾವುದೇ ನಿರ್ಣಯ ಕೈಗೊಳ್ಳಬಾರದು ಎಂದು ನಿರ್ದೇಶನ ನೀಡಿದರು. ಅಲ್ಲದೆ, ಪ್ರಕರಣದಲ್ಲಿ ಈ ಹಿಂದೆ ನೀಡಿರುವ ಮಧ್ಯಂತರ ಆದೇಶ ಮುಂದಿನ ವಿಚಾರಣಾ ದಿನಾಂಕದವರೆಗೆ ಮುಂದುವರಿಯಲಿದೆ ಎಂದು ಹೇಳಿ ವಿಚಾರಣೆ ಮುಂದೂಡಿದರು.