ಚಿಕ್ಕೋಡಿ : ಕೌಟುಂಬಿಕ ಕಲಹ ಹಾಗೂ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪುತ್ರನ ಜೊತೆ ಸೇರಿ ಪತ್ನಿ ಪತಿಯ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಪೊಗತ್ಯಾನಟ್ಟಿ ಗ್ರಾಮದ ಪ್ರಗತಿಪರ ರೈತ ಶಿವಗೌಡ ಪಾಟೀಲ ಅವರಿಗೆ ಪತ್ನಿ ಸಾವಿತ್ರಿ ಹಾಗೂ ಪುತ್ರ ಪ್ರಜ್ವಲ್ ಹಲ್ಲೆ ಮಾಡಿ ಮಾರುತಿ ಇಕೋ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಕಾರಿನಲ್ಲಿ ಕೂಡಿ ಹಾಕಿ ಹತ್ಯೆ ಮಾಡಲು ಯತ್ನಿಸಿದ್ದಾರೆ ಎಂದು ಶಿವಗೌಡ ಪಾಟೀಲ ಆರೋಪ ಮಾಡಿದ್ದಾರೆ.
ದಂಪತಿ ಮದುವೆಯಾಗಿ 22 ವರ್ಷಗಳಾಗಿದ್ದು ಅನ್ಯೋನ್ಯವಾಗಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಭಿನ್ನಾಭಿಪ್ರಾಯ ಉಂಟಾಗಿ ಆಸ್ತಿ ಬೇಕು ಎಂದು ಪತ್ನಿ ಸಾವಿತ್ರಿ ಹಾಗೂ ಪುತ್ರ ಬೇಡಿಕೆ ಇಟ್ಟಿದ್ದರು.
ಈ ಕಾರಣಕ್ಕೆ ಗಲಾಟೆಯಾಗಿದೆ ಎನ್ನುವ ಪ್ರಾಥಮಿಕ ಮಾಹಿತಿಯನ್ನ ಪೊಲೀಸರು ನೀಡಿದ್ದಾರೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಗತಿಪರ ರೈತ ಆಗಿರುವ ಶಿವಗೌಡ ವಿವಿಧ ಬಗೆಯ ಬಾಳೆ ಹಣ್ಣು ಸೇರಿದಂತೆ ದೇಶ ವಿದೇಶದ ಬೆಳೆಗಳನ್ನ ಬೆಳೆದು ಹೆಸರು ವಾಸಿಯಾಗಿದ್ದಾರೆ ಎನ್ನಲಾಗಿದೆ.















