ಬೆಂಗಳೂರು (Bengaluru)- ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನ ಹತ್ತಿರವಾಗಿದ್ದರೂ ಮೂರು ಪಕ್ಷಗಳು ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಲೆಕ್ಕಾಚಾರದಲ್ಲಿ ತೊಡಗಿವೆ. ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ನಾಲ್ಕು , ಕಾಂಗ್ರೆಸ್ ಗೆ ಎರಡು ಹಾಗೂ ಜೆಡಿಎಸ್ ಗೆ ಒಂದು ಸ್ಥಾನ ದೊರೆಯಲಿದೆ. ಮೇ 24 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಎರಡೂ ಪಕ್ಷಗಳ ರಾಜ್ಯ ನಾಯಕರು ಹೈಕಮಾಂಡ್ ಗೆ ಕಳುಹಿಸಿಕೊಟ್ಟಿದ್ದು, ಹೈಕಮಾಂಡ್ ಅಂತಿಮ ಪಟ್ಟಿ ಬಿಡುಗಡೆ ಮಾಡಬೇಕಿದೆ. ಇಂದು ಬಹುತೇಕ ಎರಡೂ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಜೆಡಿಎಸ್ ಕೂಡಾ ತನ್ನ ಅಭ್ಯರ್ಥಿ ಹೆಸರನ್ನು ಪ್ರಕಟಿಸುವ ಸಾಧ್ಯತೆಯಿದೆ.
ನಾಲ್ಕು ಸ್ಥಾನಗಳಿಗೆ ರಾಜ್ಯ ಬಿಜೆಪಿ ಸುಮಾರು 20 ಸಂಭಾವ್ಯರ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಿಕೊಟ್ಟಿದ್ದು, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಮಹಿಳೆ ಮತ್ತು ಸಾಮಾನ್ಯ ವರ್ಗದವರಿಗೆ ತಲಾ ಒಂದು ಸ್ಥಾನ ಹಂಚಿಕೆ ಮಾಡುವ ಲೆಕ್ಕಾಚಾರದಲ್ಲಿ ಒಂದೊಂದು ವರ್ಗಕ್ಕೆ ಸೇರಿದ ಐವರು ಸಂಭಾವ್ಯರ ಪಟ್ಟಿಯನ್ನು ರಾಜ್ಯ ಕೋರ್ ಕಮಿಟಿ ಹೈಕಮಾಂಡ್ ಗೆ ಕಳುಹಿಸಿ ಕೊಟ್ಟಿದೆ ಎನ್ನಲಾಗಿದ್ದು, ಪ್ರಮುಖವಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಪಕ್ಷದ ಹೈಕಮಾಂಡ್ ಆಯ್ಕೆ ಮಾಡುತ್ತಾರೋ ಇಲ್ಲವೋ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಉಳಿದಂತೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ನಿರ್ಮಲ ಕುಮಾರ ಸುರಾನಾ, ಗೀತಾ ವಿವೇಕಾನಂದ, ಎಸ್.ಮಂಜುಳಾ, ಛಲವಾದಿ ನಾರಾಯಣಸ್ವಾಮಿ, ಸಿದ್ದರಾಜು, ತೇಜಸ್ವಿನಿ ಅನಂತ ಕುಮಾರ್, ಲಿಂಗರಾಜ ಪಾಟೀಲ್, ಮಹೇಶ್ ಟೆಂಗಿನಕಾಯಿ, ಜಗದೀಶ್ ಹಿರೇಮನಿ ಹೆಸರುಗಳು ಸಂಭಾವ್ಯವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕೇಳಿಬರುತ್ತಿವೆ.
ಪರಿಷತ್ತಿನ ಏಳು ಸ್ಥಾನಗಳ ಪೈಕಿ ಕಾಂಗ್ರೆಸ್ ಗೆ ಎರಡು ಸ್ಥಾನಗಳು ಸಿಗಲಿವೆ. ಆ ಎರಡು ಸ್ಥಾನಗಳಲ್ಲಿ ಒಂದನ್ನು ಹಿಂದುಳಿದ ವರ್ಗ ಮತ್ತು ಇನ್ನೊಂದನ್ನು ಮುಸ್ಲಿಂ ಅಥವಾ ಕ್ರೈಸ್ತ ಸಮುದಾಯಕ್ಕೆ ಕೊಡಲು ಸಿದ್ದರಾಮಯ್ಯ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಎಸ್ .ಆರ್. ಪಾಟೀಲ್ ಅವರ ಪರ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಿಂದುಳಿದ ವರ್ಗದ ಒಂದು ಸ್ಥಾನಕ್ಕಾಗಿ ಮಾಜಿ ಸಚಿವ ಎಂ.ಆರ್. ಸೀತಾರಾಮ್, ಎಂ. ಡಿ. ಲಕ್ಷ್ಮೀ ನಾರಾಯಣ, ಎಂ.ಸಿ. ವೇಣುಗೋಪಾಲ್, ತಿಪ್ಪಣ್ಣ ಕಮಕನೂರು ಅವರು ಹೆಸರು ಚಾಲ್ತಿಯಲ್ಲಿದೆ. ಅದೇ ರೀತಿಯಲ್ಲಿ ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಮನ್ಸೂರ್ ಅಲಿಖಾನ್, ಅಬ್ದುಲ್ ಜಬ್ಬಾರ್, ಶಫಿ ಅಹಮದ್, ಐವಾನ್ ಡಿಸೋಜಾ, ನಿವೇದಿತ್ ಆಳ್ವಾ ಅವರ ಹೆಸರುಗಳು ಕೇಳಿಬರುತ್ತಿವೆ.