ಮೈಸೂರು: ಸಿದ್ದಾರ್ಥ ನಗರಕ್ಕೆ ಹೊಂದಿಕೊಂಡಂತಿರುವ ಹಾಗೂ ಜನನಿಬಿಡಾ ಪ್ರದೇಶದಲ್ಲಿರುವ ಆಲನಹಳ್ಳಿ ಬಡಾವಣೆಯ ನಿವೃತ್ತ ಪೊಲೀಸ್ ಅಧಿಕಾರಿ ಬಾಡಿಗೆಗೆ ನೀಡಿದ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣದ ಬಗ್ಗೆ ಅಕ್ಟೋಬರ್ 13 ರಂದು ಖುದ್ದು ನಾನೇ ಪೊಲೀಸ್ ಕಮೀಷನರ್ ಅವರು ಮೊದಲ್ಗೊಂಡು ಮೈಸೂರಿನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮೊದಲೇ ದೂರು ನೀಡಿದ್ದೆ. ಅನೈತಿಕ ಚಟುವಟಿಕೆ ನಡೆಯುತ್ತಿರುವುದು ಕಂಡು ಬಂದಲ್ಲಿ ಕ್ರಮ ಜರುಗಿಸಲು ಕೋರಿದ್ದೆ. ಅದರ ಫಲಶೃತಿಯಾಗಿ ನಮ್ಮ ಏರಿಯಾದ ಪೊಲೀಸರು ದಾಳಿ ಮಾಡಿ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾನು ಅಮೇರಿಕಾದಲ್ಲಿದ್ದ ಸಂದರ್ಭದಲ್ಲಿ ಬಾಡಿಗೆಯನ್ನು ನೀಡದೇ ಇದ್ದ ಕಾರಣಕ್ಕಾಗಿ ನಾನು ಮನೆಯ ಮತ್ತೋರ್ವ ಬಾಡಿಗೆದಾರರಾದ ಅಕಾಡೆಮಿಯ ರಾಜಶೇಖರ್ ಎಂಬುವವರಿಗೆ ಕರೆ ಮಾಡಿ ವಿಚಾರಿಸಿದಾಗ, ಅವರು ಪಾರ್ಲರ್ ನಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ತಿಳಿಸಿದರು.
ಈ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ ಆಕೆಯ ಬಿಸಿನೆಸ್ ಪಾರ್ಟ್ ನರ್ ಜಯಶ್ರೀ ಯವರು ವೈಮನಸ್ಯದಿಂದ ಈಗ ಬೇರೆಯಾಗಿದ್ದು, ಅವರ ಗಂಡ ನಾಲ್ಕಾರು ತಿಂಗಳ ಹಿಂದೆ ಪಾರ್ಲರಿಗೆ ಬಂದು ಗಲಾಟೆ ಮಾಡಿ ಅಂಗಡಿಯನ್ನು ಮುಚ್ಚಿಸುತ್ತೇನೆ ಎಂದೆಲ್ಲಾ ಧಮಕಿ ಹಾಕಿ ಹೋಗಿರುತ್ತಾನೆ. ಆತನ ಅಪಪ್ರಚಾರವೇ ಇದಕ್ಕೆ ಕಾರಣ. ನಾನು ಯಾವುದೇ ಅನೈತಿಕ ವ್ಯವಹಾರಗಳಲ್ಲಿ ತೊಡಗಿರುವುದಿಲ್ಲ. ಅತ್ಯಂತ ಗೌರವದಿಂದ ಪಾರ್ಲರ್ ನಡೆಸಿಕೊಂಡು ಹೋಗುತ್ತಿದ್ದೇನೆ . ನಾನಿಲ್ಲದ ವೇಳೆ ಮಾಲಾ ಮತ್ತು ಇನ್ನಿಬ್ಬರು ಪಾರ್ಲರ್ ನೋಡಿಕೊಳ್ಳುತ್ತಾರೆ ಇತ್ಯಾದಿಯಾಗಿ ವಿವರಣೆಯನ್ನು ನೀಡಿದ್ದರು.
ಅಕ್ಟೋಬರ್ 10 ರಂದು ಬಾಡಿಗೆದಾರರಾದ ದೀಪಿಕಾ ಮತ್ತು ಜಯಶ್ರೀ ಅವರಿಗೆ ನೋಟಿಸ್ ನೀಡಿರುವ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಮನೆಯ ಮಾಲೀಕರು ಆಗಿರುವ ಜೆ.ಬಿ.ರಂಗಸ್ವಾಮಿ, ಯಾವುದೇ ಕಾರಣಕ್ಕೂ ನಾನು ಬಾಡಿಗೆಗೆ ಕೊಟ್ಟಿರುವ ಸ್ಥಳದಲ್ಲಿ ಅನೈತಿಕ ಚಟುವಟಿಕೆಗಳಾಗಲಿ, ಕಾನೂನು ಬಾಹಿರವಾದ ಚಟುವಟಿಕೆಗೆ ಅವಕಾಶ ಕೊಡಕೂಡದು, ನಡೆಯಕೂಡದು. ಅದು ಸಮಾಜದ ಘನತೆಗೂ ಮತ್ತು ನನ್ನ ಮರ್ಯಾದೆಗೂ ಕುಂದು ಎಂಬುದು ಗೊತ್ತಿರಲಿ ಎಂದು ಬಾಡಿಗೆದಾರರಿಗೆ ಎಚ್ಚರಿಕೆ ನೀಡಿ ಮನೆ ಖಾಲಿ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಪೊಲೀಸ್ ಕಮೀಷನರ್ ಗೆ ದೂರು
ನಾನು ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಬೆಂಗಳೂರಿನಲ್ಲಿ ವಾಸವಿರುತ್ತೇನೆ. ಆಲನಹಳ್ಳಿ ಬಡಾವಣೆಯಲ್ಲಿರುವ ನನ್ನ ಮನೆಯ ಮೇಲ್ಭಾಗದ ಹಾಲ್ ನ್ನು ದೀಪಿಕಾ ಮತ್ತು ಜಯಶ್ರೀ ಎಂಬುವವರಿಗೆ ಬಾಡಿಗೆ ಕೊಟ್ಟಿರುತ್ತೇನೆ. ಇನ್ನೊಂದು ಭಾಗವನ್ನು ಅಕಾಡೆಮಿ ಅವರಿಗೆ ಬಾಡಿಗೆ ನೀಡಿದ್ದೇನೆ.
ಮನೆಯಲ್ಲಿ ನಾನು ನನ್ನ ಪತ್ನಿ ಇಬ್ಬರೇ ಇರುವುದು. ನಾನು ಸಾಮಾನ್ಯವಾಗಿ ಊರಿನಲ್ಲಿರುವುದು ಕಡಿಮೆ. ಪ್ರವಾಸದ ಪ್ರಯುಕ್ತ ಇತರೆ ಊರುಗಳಿಗೆ ಹೋಗುತ್ತಲೇ ಇರುತ್ತೇವೆ. ಅಂತೆಯೇ ಆರು ತಿಂಗಳ ಹಿಂದೆ ಅಮೆರಿಕಾಗೆ ಹೋಗಿ ಕಳೆದ ತಿಂಗಳು ವಾಪಸಾಗಿರುತ್ತೇವೆ.
ಈಗ ತಿಳಿದು ಬಂದಿರುವ ಮಾಹಿತಿ ಎಂದರೆ ಧನಿಯಾ ಎಂಬ ಬ್ಯೂಟಿ ಪಾರ್ಲರ್ ನಲ್ಲಿ ಅನೈತಿಕ ವ್ಯವಹಾರ ನಡೆಯುತ್ತಿವೆ. ಇದು ಆಘಾತಕಾರಿ ಸಂಗತಿ. ನಾವು ಊರಿನಲ್ಲಿ ಇಲ್ಲದೆ ಇರುವುದರಿಂದ ಇಲ್ಲಿ ಏನೇನು ಚಟುವಟಿಕೆ ನಡೆಯುತ್ತಿದೆ ಎಂದು ಟ್ರ್ಯಾಕ್ ಮಾಡಿ ತಿಳಿಯಲಾಗುತ್ತಿಲ್ಲ. ಬಾಡಿಗೆದಾರಳಾದ ದೀಪಿಕಾ ಅವರಿಗೂ ತೀವ್ರ ಎಚ್ಚರಿಕೆ ನೀಡಿದ್ದು, ಮನೆ ಖಾಲಿ ಮಾಡುವಂತೆ ತಿಳಿಸಿರುತ್ತೇನೆ.
ತಾವು ಈ ಮನೆಯಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾವಹಿಸಿ, ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದರೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿಸುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದು, ಕೆಲವು ದಿನಗಳ ಬಳಿಕ ವಿಚಾರಿಸಿದಾಗ ವಾಚ್ ಮಾಡುತ್ತಿದ್ದೇವೆ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದರು.
ಅಕ್ಟೋಬರ್ 31 ರಂದು ಕಾನ್ಸ್ ಟೇಬಲ್ ನೀಡಿದ ಮಾಹಿತಿ ಮೇರೆಗೆ ಪೊಲೀಸಿನವರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಮನೆ ಖಾಲಿ ಮಾಡಿಸಲು ನಾನು ಕೇಸ್ ಹಾಕಿರುವುದಲ್ಲ. ಜವಬ್ದಾರಿಯುತ ಸಾರ್ವಜನಿಕನಾಗಿ ನಾನು ಏನು ಮಾಡಬೇಕೊ ಅದನ್ನು ಮಾಡಿದ್ದೇನೆ. ಈ ದಾಳಿ ಮಾಡಿರುವುದು ನಾನು ನೀಡಿದ ಮಾಹಿತಿಯನ್ನು ಆಧರಿಸಿ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಪೊಲೀಸಿನವರು ಹಾಗೂ ಕಮೀಷನರ್ ಗೆ ನಾನು ಅಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಕೆಲವು ಆರೋಪಗಳ ಬಗ್ಗೆ ಜೆ.ಬಿ.ರಂಗಸ್ವಾಮಿ ಸಮರ್ಥನೆ
ಸೌಜನ್ಯ ರೇಪ್ ಮತ್ತು ಮರ್ಡರ್ ಪ್ರಕರಣದಲ್ಲಿ ನಾನು ಬರೆದಿದ್ದ ಸಿರೀಸ್ ಲೇಖನಗಳ ಪರಿಣಾಮ ಕೆಲವು ಹಿತಾಸಕ್ತಿ ಗುಂಪುಗಳು, ಇದನ್ನೇ ನೆಪವಾಗಿಟ್ಟು ಕೊಂಡು ನಾನೇ ವೇಶ್ಯಾವಾಟಿಕೆ ನಡೆಸುತ್ತಿದ್ದೆ ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ ಎಂದಿದ್ದಾರೆ.
ಅದರಲ್ಲಿ ಪೊಲೀಸರು ಸಂತೋಷನನ್ನು ಆರೋಪಿತನೆಂದು ಪರಿಗಣಿಸಿರುವುದನ್ನು ಸಮರ್ಥಿಸಿದ್ದೆ. ಈ ನೆಪದಲ್ಲಿ ನಕಲಿ ಹೋರಾಟ ಮಾಡುತ್ತಿರುವವರ ದುರುದ್ದೇಶಗಳನ್ನು ಬಯಲಿಗೆಳೆದಿದ್ದೆ. ನನ್ನ ವಿಶ್ಲೇಷಣೆಯು ನನ್ನ ಅನುಭವವನ್ನು ಆಧರಿಸಿದ್ದು. ಅದು ನನ್ನ ವೈಯುಕ್ತಿಕ ಅಭಿಪ್ರಾಯ ಮಾತ್ರ. ಇದರಿಂದ ಬೇಸರಗೊಂಡ ವಿರೋಧಿ ಗುಂಪು ನಿರಂತರವಾಗಿ ನನ್ನ ಮೇಲೆ ಪ್ರಹಾರ ನಡೆಸುತ್ತಿದೆ. ಈ ಹೋರಾಟಗಾರರ ಮುಖವಾಣಿಯಾಗಿರುವ ಕರಾವಳಿಯ ಕೆಲವು ಟಿವಿಗಳು ಪತ್ರಿಕೆಗಳು ಇದನ್ನೇ ಕಾಯಕ ಮಾಡಿಕೊಂಡಿವೆ ಎಂದು ಜೆ.ಬಿ.ರಂಗಸ್ವಾಮಿ ಆರೋಪ ಮಾಡಿದ್ದಾರೆ.