ಮನೆ ಅಪರಾಧ ಬ್ಯೂಟಿ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ: ಒಡನಾಡಿ ಮತ್ತು ಕೃಷ್ಣರಾಜ ಠಾಣಾ ಪೊಲೀಸರಿಂದ ದಾಳಿ

ಬ್ಯೂಟಿ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ: ಒಡನಾಡಿ ಮತ್ತು ಕೃಷ್ಣರಾಜ ಠಾಣಾ ಪೊಲೀಸರಿಂದ ದಾಳಿ

0

ಮೈಸೂರು: ಮೈಸೂರು ಸಾಂಸ್ಕೃತಿಕ ನಗರಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ಕೆಲವರು ಈ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡುತ್ತಿದ್ದಾರೆ.

ಅಗ್ರಹಾರದ 101 ಗಣಪತಿ ದೇವಸ್ಥಾನದ ಬಳಿ ಇರುವ ಮುತ್ತೂಟ್ ಫೈನಾನ್ಸ್ ಕಚೇರಿಯ ಕಟ್ಟಡದಲ್ಲಿರುವ 2ನೇ ಮಹಡಿಯಲ್ಲಿ ಬ್ಯೂಟಿ ಪಾರ್ಲರ್ ಹೆಸರಲ್ಲಿ ಯಾವುದೇ  ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಲಕ್ಷ್ಮಿ ಬ್ಯೂಟಿ ಪಾರ್ಲರ್ ಬೋಟಿಕ್, ಟ್ಯಾಟೂಸ್ ಆ್ಯಂಡ್ ಸ್ಪಾ  ಮೇಲೆ ಒಡನಾಡಿ ಸಂಸ್ಥೆ ಸಹಯೋಗದಲ್ಲಿ ಕೃಷ್ಣರಾಜ ಪೊಲೀಸರು ದಾಳಿ ನಡೆಸಿ, ಓರ್ವ ಮಹಿಳೆ ಮತ್ತು ವ್ಯಕ್ತಿಯನ್ನು ಬಂಧಿಸಿದ್ದಾರೆ.

ಈ ಕುರಿತು ಸವಾಲ್ ಪತ್ರಿಕೆಯೊಂದಿಗೆ ಮಾತನಾಡಿದ  ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಖಚಿತ ಮಾಹಿತಿ ಮೇರೆಗೆ  ದಾಳಿ ನಡೆಸಿದ್ದು, ಬ್ಯೂಟಿ ಪಾರ್ಲರ್ ನಿಂದ ನಮಗೆ ಅಭ್ಯಂತರವಿಲ್ಲ. ಆದರೆ ಕೆಲವರು ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ದಂಧೆಯನ್ನು ನಡೆಸುತ್ತಿದ್ದಾರೆ. ಸದರಿ ಸ್ಪಾ ನಲ್ಲಿ ಕೂಡ  ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಕುರಿತು ಹಾಗೂ ನಾಲ್ವರು ಸ್ಥಳದಲ್ಲಿರುವ ಮಾಹಿತಿ  ಇತ್ತು. ಆದರೆ ಪೊಲೀಸರು ಸ್ಥಳಕ್ಕೆ  ಬರುವುದು ಕೊಂಚ ತಡವಾದ ಕಾರಣ ಕೆಲವು ಮಹಿಳೆಯರನ್ನು ಬೇರೆಡೆ ಸ್ಥಳಾಂತರ ಮಾಡಿದ್ದಾರೆಂದು ತಿಳಿಸಿದರು.

ಬಂಧಿತ ಯುವತಿ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಮಾತ್ರವಲ್ಲದೇ ಆಕೆ ಬ್ಯೂಟಿ ಪಾರ್ಲರ್ ಗಾಗಿ ಬಂದಿದ್ದಳೆಂದು ನಂಬುವಂತೆಯೂ ಇರಲಿಲ್ಲ. ಸಿಕ್ಕಿ ಬಿದ್ದ ವ್ಯಕ್ತಿ ಅಲ್ಲಿ ಲೈಂಗಿಕ ಚಟುವಟಿಕೆ ನಡೆಯುತ್ತಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾನೆ. ಮಾತ್ರವಲ್ಲದೇ ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆ ದೊರೆತಿವೆ ಎಂದರು.

ನಮ್ಮ ಬಳಿ  ಹೆಣ್ಣುಮಕ್ಕಳ ಫೋಟೋಗಳನ್ನು ಬೇರೆಯವರಿಗೆ ಕಳುಹಿಸಿದ ವಾಟ್ಸಪ್ ಸಂದೇಶಗಳು, ವಿಡಿಯೋ ಲಭ್ಯವಿದೆ, ಸ್ಥಳದಲ್ಲಿ ನಂಬರ್ ಪ್ಲೇಟ್ ಇಲ್ಲದ ವಾಹನವಿದ್ದ ದಾಖಲೆಯನ್ನು ಪೊಲೀಸರಿಗೆ ನೀಡಿದ್ದೇವೆ ಎಂದು ಹೇಳಿದರು.

ಪೊಲೀಸ್ ಠಾಣೆ ಕೂಗಳತೆ ದೂರದಲ್ಲಿದ್ದರು ಪೊಲೀಸರ ಕಣ್ಣಿಗೆ ಮಣ್ಣೆರಚಿ ದಂಧೆ ನಡೆಸಲಾಗುತ್ತಿತ್ತು. 2 ವರ್ಷದ ಹಿಂದೆ ಇದೇ ಸ್ಥಳದ ಮೇಲೆ ನಾವು ದಾಳಿ ನಡೆಸಿದ್ದೆವು. ಮತ್ತೆ ಅದೇ ಸ್ಥಳದಲ್ಲಿ ಲಕ್ಷ್ಮಿ ಬ್ಯೂಟಿ ಪಾರ್ಲರ್ ಬೋಟಿಕ್, ಟ್ಯಾಟೂಸ್ ಅಂಡ್ ಸ್ಪಾ ಹೆಸರಲ್ಲಿ ದಂಧೆ  ನಡೆಸಲಾಗುತ್ತಿತ್ತು. ಪಾರ್ಲರ್ ನಡೆಸಲು ಇವರು ಲೈಸೆನ್ಸ್ ಕೂಡ ಹೊಂದಿಲ್ಲ. ವೇಶ್ಯಾವಾಟಿಕೆ ನಡೆಸುತ್ತಿರುವುದರಿಂದ ಸದರಿ ಕಟ್ಟಡವನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳಬೇಕು. ವೇಶ್ಯಾವಾಟಿಕೆಗೆ ಅವಕಾಶ ನೀಡಬಾರದು ಎಂದು ಸ್ಟ್ಯಾನ್ಲಿ ಅವರು ಆಗ್ರಹಿಸಿದ್ದಾರೆ.

ದಾಳಿಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ನಾಗೇಗೌಡ, ಸಬ್ ಇನ್ಸ್ ಪೆಕ್ಟರ್, ಮಹಿಳಾ ಪೊಲೀಸ್ ಸಿಬ್ಬಂದಿ,  ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್, ಪ್ರದೀಪ್, ಸುಮ, ರಶ್ಮಿ, ಭಾನು ಭಾಗಿಯಾಗಿದ್ದರು.