ಮನೆ ಸ್ಥಳೀಯ ನಗರಗಳಲ್ಲಿ ನಾಯಿ ಕೊಡೆಯಂತೆ ತಲೆ ಎತ್ತುತ್ತಿರುವ ವೇಶ್ಯಾವಾಟಿಕೆ ತಾಣಗಳು: ನಿಯಂತ್ರಣಕ್ಕೆ ಒಡನಾಡಿ ಸೇವಾ ಸಂಸ್ಥೆ ಆಗ್ರಹ

ನಗರಗಳಲ್ಲಿ ನಾಯಿ ಕೊಡೆಯಂತೆ ತಲೆ ಎತ್ತುತ್ತಿರುವ ವೇಶ್ಯಾವಾಟಿಕೆ ತಾಣಗಳು: ನಿಯಂತ್ರಣಕ್ಕೆ ಒಡನಾಡಿ ಸೇವಾ ಸಂಸ್ಥೆ ಆಗ್ರಹ

0

ಮೈಸೂರು: ಮೈಸೂರು ನಗರದಲ್ಲಿ ಇತ್ತೀಚೆಗೆ ನಾನಾ ಹೆಸರುಗಳಲ್ಲಿ ವೇಶ್ಯಾವಾಟಿಕೆ ದಂಧೆಯು ಎಗ್ಗಿಲ್ಲದೆ ನಡೆಯುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದ್ದು, ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಹಭಾಗಿತ್ವದ ಕಾನೂನು ಬದ್ಧ ಕಾರ್ಯಾಚರಣೆಗಳು ನಡೆಯಬೇಕು ಎಂದು ಒಡನಾಡಿ ಸೇವಾ ಸಂಸ್ಥೆ ಆಗ್ರಹಿಸಿದೆ.

Join Our Whatsapp Group

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕಾರದ Stanley ಮತ್ತು Parashuram, ಮೈಸೂರಿನಲ್ಲಿ ಈ ಋಣಾತ್ಮಾಕ ಬೆಳವಣಿಗೆಯನ್ನು ನಿಯಂತ್ರಿಸದೆ ಹೋದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮುಂದೊಮ್ಮೆ ವೇಶ್ಯಾವಾಟಿಕೆಯ ಕೇಂದ್ರ ಎನ್ನಿಸಿಕೊಳ್ಳಬಹುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಕಾನೂನು ಬಾಹಿರವಾದ ಈ ಚಟುವಟಿಕೆ ಬ್ಯೂಟಿ ಪಾರ್ಲರ್, ಸ್ಪಾ, ಸರ್ವಿಸ್ ಮೊದಲಾದ ಹೆಸರುಗಳ ದುರುಪಯೋಗದೊಂದಿಗೆ ನಡೆಯುತ್ತಿರುವುದು ಒಂದೆಡೆಯಾದರೆ ಅಡ್ಡೆಗಳನ್ನು ಕಂಡು ಹಿಡಿದು ಕಾನೂನು ಸಮಕ್ಷಮಕ್ಕೆ ತರಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಇಲಾಖೆಯ ಘನತೆಯನ್ನು ಅಡಕತ್ತರಿಯಲ್ಲಿರಿಸಿ ತಮ್ಮ ವೈಯಕ್ತಿಕ ಲಾಭಗಳಿಗಾಗಿ ಕಾನೂನು ವಿರೋಧಿ ವ್ಯಕ್ತಿಗಳೊಂದಿಗೆ ಕೈ ಜೋಡಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಂತೆಯೇ ಈ ದಂಧೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯನ್ನು ರೂಡಿಸಿಕೊಂಡಿರುವ ನಿಷ್ಠಾವಂತ ಅಧಿಕಾರಿಗಳು ನಡೆಸುವ ಪ್ರಯತ್ನಗಳು ಕೂಡ ಭ್ರಷ್ಟರಿಂದಾಗಿ ವಿಫಲಗೊಳ್ಳುತ್ತಿರುವುದಕ್ಕೆ ವಿಷಾಧ ವ್ಯಕ್ತಪಡಿಸಿದ್ದಾರೆ.

ಮಾನವ ಕಳ್ಳ ಸಾಗಾಣಿಕೆ ತಡೆಗಾಗಿಯೇ ನಿಯೋಜಿಸಲ್ಪಟ್ಟಿರುವ ತಂಡಗಳು ಕೂಡ (AHTU) ಇಲಾಖೆಯೊಳಗಿನ ತಮ್ಮ ಸಂಬಂಧಗಳನ್ನು ಹದಗೆಡಿಸಿಕೊಳ್ಳಲು ಇಚ್ಚಿಸದೆ ಕೈ ಚೆಲ್ಲುತ್ತಿರುವುದು ಕಂಡು ಬರುತ್ತಿದೆ. ಹತ್ತು ಹಲವು ಬಾರಿ ಕಾನೂನಿನ ಚೌಕಟ್ಟಿಗೆ ಬಂದಿರುವ ಪುನರಾವರ್ತಿತ ಆರೋಪಿಗಳು ಮತ್ತೆ ಮತ್ತೆ ಈ ದಂಧೆಗಳನ್ನು ನಡೆಸುತ್ತಿರುವುದು ಹಾಗೂ ಅವರಿಗೆ ನೀಡಿದ ಜಾಮೀನು ರದ್ದಾಗದಿರುವುದು ಈ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನ ಭವಿಷ್ಯ ಹಾಗೂ ಅಭಿವೃದ್ಧಿಯ ಕಾರ್ಯ ಸೂಚಿಯೊಂದನ್ನು ತಯಾರಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಕ್ಷೇತ್ರ ತಜ್ಞರ ಜೊತೆ ಸಮಾಲೋಚನೆ ನಡೆಸಿರುವುದು ಸ್ವಾಗತಾರ್ಹ ಹಾಗೂ ಅಭಿನಂದನಾರ್ಹ ನಡೆಯಾಗಿದೆ. ಸರ್ಕಾರಕ್ಕೆ ಇರುವ ಆಸಕ್ತಿ ಹಾಗೂ ಕನಸುಗಳಿಗೆ ಈ ಕಾನೂನುಬಾಹಿರ ಅಡ್ಡೆಗಳ ಹೆಚ್ಚುವಿಕೆ ದೊಡ್ಡ ತಲೆನೋವಾಗಿದೆ. ಅಲ್ಲದೆ ಸರ್ಕಾರದ ಈ ಕನಸುಗಳನ್ನು ನನಸಾಗಿಸುವತ್ತ ಅಧಿಕಾರಿಗಳು ತಮ್ಮ ಕರ್ತವ್ಯ ಪ್ರಜ್ಞೆಯಿಂದ ಹೊರ ಸರಿಯುತ್ತಿರುವುದು ಅತ್ಯಂತ ಆತಂಕ ಹುಟ್ಟಿಸುವ ಸಂಗತಿಯಾಗಿದೆ.

ಈ ಹೇಸಿಗೆ ದಂಧೆಯ ವಾಸನೆ ತಳಮಟ್ಟದಿಂದ ಏರುತ್ತಾ ಮೇಲ್ಮಟ್ಟದವರೆಗೆ ವ್ಯಾಪಿಸುತ್ತಿರುವುದು ಸರ್ಕಾರದ ಗ್ರಹಣ ಶಕ್ತಿಗೆ ತಲುಪಬೇಕಾಗಿದೆ. ನಗರದ ಪ್ರತಿ ಕಿಲೋಮೀಟರ್ ವ್ಯಾಪ್ತಿಯಲ್ಲೂ ಈ ದಂಧೆಗಳು ನಡೆಯುತ್ತಿರುವುದು ಕಾನೂನು ಸುವ್ಯವಸ್ಥೆಯಲ್ಲಿ ಇರುವ ಲೋಪವನ್ನು ಎತ್ತಿ ಹಿಡಿಯುತ್ತಿದೆ ಎಂದು ಆರೋಪಿಸಿದ್ದಾರೆ.

ಕಳೆದ 35 ವರ್ಷಗಳಿಂದ ಮಾನವ ಕಳ್ಳ ಸಾಗಣಿಕೆ. ವೇಶ್ಯಾವಾಟಿಕೆ ಹಾಗೂ ಲೈಂಗಿಕ ಅಪರಾಧಗಳ ವಿರುದ್ಧ ಹೋರಾಟ ನಡೆಸುತ್ತಲೇ ನೊಂದವರ ಜೀವನ ಕಟ್ಟಿಕೊಡುವ ಕಾರ್ಯದಲ್ಲಿ ನಿರತವಾಗಿರುವ ಒಡನಾಡಿ ಸೇವಾ ಸಂಸ್ಥೆಯು, ಸರ್ಕಾರ ಹಾಗೂ ಇಲಾಖೆಗಳ ಪ್ರಯತ್ನಕ್ಕೆ ಕೈ ಜೋಡಿಸಲು ಸದಾ ಸಿದ್ಧವಿದೆ ಎಂದು ತಿಳಿಸಿದ್ದಾರೆ.

ಮೈಸೂರಿನ ಬೆಲೆವೆಣ್ಣುಗಳ ವ್ಯಾಪಾರಕ್ಕೆ ಕಡಿವಾಣ ಹಾಕಲು ಒಡನಾಡಿ ತೆಗೆದುಕೊಂಡಿರುವ ಕ್ರಮಗಳಿಗೆ ಸವಾಲ್ ಪತ್ರಿಕೆ ಕೈ ಜೋಡಿಸಲಿದೆ. ಸ್ಪಾ ಹಾಗೂ ಮಸಾಜ್ ಪಾರ್ಲರ್ ಹೆಸರಿನಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಯ ತಡೆಗಟ್ಟಿವಿಕೆಗೆ ಒಡನಾಡಿ ಸಂಸ್ಥೆ ಸುನಾಮಿಯಂತೆ ಎರಗಿ  ಸಾಂಸ್ಕೃತಿಕ ನಗರಿಯ ಹೆಸರನ್ನು ಉಜ್ವಲಗೊಳಿಸಬೇಕೆಂಬುದು ಸವಾಲ್ ಪತ್ರಿಕೆಯ ಆಶಯವಾಗಿದೆ.