ಚಾಮರಾಜನಗರ(Chamarajanagar): ಕೆಲವು ದಿನಗಳ ಹಿಂದೆ ಬಂಡೀಪುರದಲ್ಲಿ ಕಾಡಾನೆಯೊಂದು ಅವಳಿ ಆನೆ ಮರಿಗಳಿಗೆ ಜನ್ಮ ನೀಡಿತ್ತು. ಈ ಆನೆಯು ಅಲ್ಲಿಯೇ ಇದ್ದ ನೀರಿನ ಹೊಂಡದಲ್ಲಿ ಮರಿಗಳಿಗೆ ಜನ್ಮ ನೀಡಿತ್ತು. ಈ ನೀರಿನ ಹೊಂಡದಿಂದ ಹೊರ ಬರಲಾಗದೇ ಒದ್ದಾಡುತ್ತಿದ್ದ ಆನೆ ಮರಿಗಳನ್ನು ಅರಣ್ಯ ಇಲಾಖೆಯ ಇಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಕಳೆದ ಏ. 17 ರಂದು ಬಂಡೀಪುರ ಹಳೇ ಸಫಾರಿ ಕೇಂದ್ರದಿಂದ 200 ಮೀಟರ್ ದೂರದ ಮೂರ್ಕೆರೆ ಎಂಬಲ್ಲಿ ಒಂದು ಸಫಾರಿ ವಾಹನದ ಚಾಲಕ ಕಾಡಾನೆಯೊಂದು ಅವಳಿ ಆನೆ ಮರಿಗಳಿಗೆ ಜನ್ಮ ನೀಡಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಚಾರ ಅರಿತ ಅಧಿಕಾರಿಗಳು ಮಧ್ಯಾಹ್ನದ ಹೊತ್ತಿಗೆ ಸ್ಥಳಕ್ಕೆ ತೆರಳಿದಾಗ ಕಾಡಾನೆಯೊಂದು ನೀರಿನ ಹೊಂಡದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ್ದು ಕಂಡುಬಂದಿದೆ. ಆದರೆ, ಆನೆ ಮರಿಗಳ ಕುತ್ತಿಗೆಯವರೆಗೆ ನೀರು ಇದ್ದುದ್ದರಿಂದ ಅವುಗಳು ನೀರಿನಿಂದ ಮೇಲಕ್ಕೆ ಬರಲು ಕಷ್ಟಪಡುತ್ತಿದ್ದವು.ಬಂಡೀಪುರದ ಅವಳಿ ಆನೆ ಮರಿಗಳುಇವೆಲ್ಲವನ್ನೂ ಬಂಡೀಪುರದ ಅಧಿಕಾರಿಗಳು ಗಮನಿಸಿ ಕಾಯುತ್ತ ಕುಳಿತಿದ್ದರೂ, ಆನೆ ಮರಿಗಳು ಹೊಂಡದಿಂದ ಮೇಲಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ “ಆಪರೇಷನ್ ಟ್ವಿನ್ಸ್” ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ. ಇಲ್ಲಿ ಎರಡು ತಂಡವನ್ನು ರಚಿಸಿ, ಒಂದು ತಂಡ ತಾಯಿ ಆನೆಯನ್ನು ದೂರಕ್ಕೆ ಓಡಿಸುವ ಕಾರ್ಯವನ್ನು, ಮತ್ತೊಂದು ತಂಡ ಅವಳಿ ಆನೆ ಮರಿಗಳನ್ನು ಹೊಂಡದಿಂದ ಮೇಲಕ್ಕೆ ಎತ್ತುವ ಕೆಲಸವನ್ನು ಮಾಡಿದ್ದಾರೆ. ಬಳಿಕ ತಾಯಿ ಆನೆ ಬಂದು ಎರಡೂ ಮರಿಗಳನ್ನು ಕಾಡಿಗೆ ಕರೆದೊಯ್ದಿದೆ.














