ಮನೆ ಕಾನೂನು ಅಯೋಧ್ಯಾ-ಬಾಬರಿ ಮಸೀದಿ ತೀರ್ಪಿನ ವಿರುದ್ಧ ಪ್ರತಿಭಟನೆ: ಪೂರ್ವಾನುಮತಿ ಇಲ್ಲ ಎಂದು ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಅಯೋಧ್ಯಾ-ಬಾಬರಿ ಮಸೀದಿ ತೀರ್ಪಿನ ವಿರುದ್ಧ ಪ್ರತಿಭಟನೆ: ಪೂರ್ವಾನುಮತಿ ಇಲ್ಲ ಎಂದು ಪ್ರಕರಣ ರದ್ದುಪಡಿಸಿದ ಹೈಕೋರ್ಟ್

0

 “ಅಯೋಧ್ಯಾ-ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸುವುದು ಧರ್ಮದ ಆಧಾರದ ಮೇಲೆ ಎರಡು ಗುಂಪುಗಳ ನಡುವೆ ದ್ವೇಷ ಬಿತ್ತುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಇಂತಹ ವಿಚಾರಗಳನ್ನು ಲಘುವಾಗಿ ಪರಿಗಣಿಸಲಾಗದು” ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದೆ.

ಮಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್’ನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟಿಸಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ 25 ವರ್ಷದ ಆರೋಪಿ ಸಫ್ವಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

ಮಂಗಳೂರು ವಿವಿ ಬಳಿ ನೆಲೆಸಿರುವ ಸ್ಥಳೀಯ ನಿವಾಸಿ ಅರ್ಜಿದಾರ ಪ್ರಕರಣದ ಇತರ ಆರೋಪಿಗಳಾಗಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ (ಸಿಎಫ್ಐ) ಸದಸ್ಯರೊಂದಿಗೆ ಬ್ಯಾನರ್ ಹಿಡಿದು ವಿಶ್ವವಿದ್ಯಾಲಯದ ಕ್ಯಾಂಪಸ್ಗೆ ತೆರಳಿ, ಅಯೋಧ್ಯಾ-ಬಾಬ್ರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇದು ಧರ್ಮದ ಆಧಾರದ ಮೇಲೆ ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತದೆಯೇ ಹೊರತು, ಬೇರೇನೂ ಅಲ್ಲ. ಮಂಗಳೂರು ಭಾಗದಲ್ಲಿ ಸೌಹಾರ್ದತೆಗೆ ಧಕ್ಕೆ ತರುವಂತಹ ಕೃತ್ಯವಾಗಿದ್ದು, ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅರ್ಜಿದಾರರ ಕೃತ್ಯಕ್ಕೆ ಪುರಾವೆಗಳೂ ಲಭ್ಯವಿದ್ದು, ಇದು ಐಪಿಸಿ ಸೆಕ್ಷನ್ 153-ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣ ರದ್ದು: ಅರ್ಜಿದಾರ ಸಫ್ವಾನ್ ವಿರುದ್ಧ ಐಪಿಸಿ ಸೆಕ್ಷನ್ 153ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು), 149 (ಅಕ್ರಮ ಕೂಟ ರಚಿಸಿಕೊಂಡು ಅಪರಾಧ ಎಸಗುವುದು) ಹಾಗೂ ಕರ್ನಾಟಕ ಸಾರ್ವಜನಿಕ ಸ್ಥಳ ವಿರೂಪ ಕಾಯಿದೆಯ ಸೆಕ್ಷನ್ 3ರ ಅಡಿ ಪ್ರಕರಣ ದಾಖಲಿಸಲಾಗಿದೆ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್’ಪಿಸಿ) ಸೆಕ್ಷನ್ 196ರ ಪ್ರಕಾರ ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿನ ಅಪರಾಧಗಳಿಗೆ ಸಂಬಂಧಿಸಿದಂತೆ ಸಂಜ್ಞೇಯಕ್ಕೆ ತೆಗೆದುಕೊಳ್ಳಲು ಸರ್ಕಾರದ ಪೂರ್ವಾನುಮತಿ ಅಗತ್ಯವಾಗಿದೆ. ಆದರೆ, ಅರ್ಜಿದಾರನ ವಿರುದ್ಧ ವಿಚಾರಣೆ ನಡೆಸಲು ಸರ್ಕಾರ ಪೂರ್ವಾನುಮತಿ ನೀಡಿರುವ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲ. ಹೀಗಿದ್ದರೂ, ಮ್ಯಾಜಿಸ್ಟ್ರೇಟ್ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಆದ್ದರಿಂದ, ಅರ್ಜಿದಾರನ ವಿರುದ್ಧದ ಪ್ರಕರಣ ರದ್ದುಪಡಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಅಯೋಧ್ಯಾ-ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ 2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ವಿರೋಧಿಸಿ ಮಂಗಳೂರಿನಲ್ಲಿ ಪಿಎಫ್’ಐ ಹಾಗೂ ಸಿಎಫ್’ಐ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಆ ಗುಂಪಿನಲ್ಲಿ ಸೇರಿಕೊಂಡು ಸಿಎಫ್’ಐ ಬ್ಯಾನರ್ ಹಿಡಿದು ಘೋಷಣೆ ಕೂಗಿದ ಆರೋಪ ಅರ್ಜಿದಾರರ ಮೇಲಿದೆ. ಈ ಸಂಬಂಧ ಕೋಣಾಜೆ ಪೊಲೀಸರು ಅರ್ಜಿದಾರರೂ ಸೇರಿ ಪ್ರತಿಭಟನಾ ನಿರತ ಗುಂಪಿನ ಸದಸ್ಯರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ಅರ್ಜಿದಾರ ಸಫ್ವಾನ್ 11ನೇ ಆರೋಪಿಯಾಗಿದ್ದಾರೆ.

ಹಿಂದಿನ ಲೇಖನಹೈಕೋರ್ಟ್ ಅಂಗಳಕ್ಕೆ ಜಾಮಿಯಾ ಮಸೀದಿ ವಿವಾದ: ಮೂಡಲಬಾಗೀನ ಆಂಜನೇಯಸ್ವಾಮಿಯೇ ಪಿರ್ಯಾದುದಾರ
ಮುಂದಿನ ಲೇಖನಮುಳುಗುತ್ತಿದ್ದ ತಮ್ಮನ ರಕ್ಷಣೆಗೆ ಧಾವಿಸಿದ ಸಹೋದರಿಯರು ನೀರು ಪಾಲು