ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಿರುವ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ವಿರೋಧಿಸಿ ಸಂಭಾಜಿ ವೃತ್ತಕ್ಕೆ ಬಂದ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಮುಖಂಡರು ಹಾಗೂ ಕಾರ್ಯಕರ್ತರನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದರು.
ಎಂಇಎಸ್ ಮಹಾಮೇಳ ಆಯೋಜಿಸದಂತೆ ಪೊಲೀಸರು ಭಾರಿ ಭದ್ರತೆ ಏರ್ಪಡಿಸಿದ್ದರು. ಮೊದಲಿಗೆ, ಎಂಇಎಸ್ನ ಕಾರ್ಯಾಧ್ಯಕ್ಷ ಮನೋಹರ್ ಕಿಣೇಕರ್ ಮತ್ತು ಖಜಾಂಚಿ ಪ್ರಕಾಶ ಮಾರ್ಗಲೆ ಸೇರಿದಂತೆ ಕಾರ್ಯಕರ್ತರನ್ನು ರಾಮಲಿಂಗಖಿಂಡ್ ಗಲ್ಲಿಯಲ್ಲಿರುವ ಕಚೇರಿಯಿಂದ ಬಂಧಿಸಲಾಯಿತು.
ನಂತರ ಮಹಾರಾಷ್ಟ್ರ ಪರ ಘೋಷಣೆಗಳನ್ನು ಕೂಗುತ್ತಾ ಗುಂಪು ಗುಂಪಾಗಿ ಆಗಮಿಸಿದ ಕಾರ್ಯಕರ್ತರನ್ನು ಸಂಭಾಜಿ ವೃತ್ತದಲ್ಲಿ ಪೊಲೀಸರು ವಶಕ್ಕೆ ಪಡೆದರು.
ಸಂಭಾಜಿ ವೃತ್ತದಲ್ಲಿ ಎಂಇಎಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಬಂದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಸಲ್ಲಿಸಿರುವ ಮೊಕದ್ದಮೆ ವಿಚಾರವಾಗಿ ಸುಪ್ರೀಂ ಕೋರ್ಟ್ ಇನ್ನೂ ತೀರ್ಪು ನೀಡಿಲ್ಲ. ಹೀಗಾಗಿ ಚಳಿಗಾಲದ ಅಧಿವೇಶನವನ್ನು ವಿರೋಧಿಸಿ ಸಮಾವೇಶ ನಡೆಸುವುದಾಗಿ ಎಂಇಎಸ್ ಇತ್ತೀಚೆಗೆ ಘೋಷಿಸಿತ್ತು. ಆದರೆ, ಸಮಾವೇಶಕ್ಕೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ.
ವಿಧಾನಮಂಡಲ ಅಧಿವೇಶನ ವಿರೋಧಿಸಿ ಸಮಾವೇಶ ನಡೆಸಲು ಎಂಇಎಸ್ ಮುಖಂಡರು ಹಾಗೂ ಕಾರ್ಯಕರ್ತರು ಯತ್ನಿಸಬಹುದು ಎಂಬ ನಿರೀಕ್ಷೆಯಿಂದ ಸಂಭಾಜಿ ವೃತ್ತ, ಸಂಭಾಜಿ ಗಾರ್ಡನ್, ವ್ಯಾಕ್ಸಿನ್ ಡಿಪೋ ಮೈದಾನ ಹಾಗೂ ಶಿವಾಜಿ ಗಾರ್ಡನ್ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸ್ಥಳಕ್ಕೆ ಬಂದರೆ ಎಂಇಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಪೊಲೀಸರು ಸನ್ನದ್ಧರಾಗಿದ್ದರು.
ಎಂಇಎಸ್ ಸಮಾವೇಶಕ್ಕೆ ಅನುಮತಿ ನೀಡಿಲ್ಲ. ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ರೋಹನ್ ಜಗದೀಶ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದ ಗಡಿಯ ಚೆಕ್ಪೋಸ್ಟ್ಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದ್ದು, ಎಂಇಎಸ್ ಮುಖಂಡರ ಮತ್ತು ಕಾರ್ಯಕರ್ತರ ಪ್ರವೇಶವನ್ನು ತಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.