ಬೆಂಗಳೂರು: ಮುಡಾ ಅಕ್ರಮ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳಿನ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆಗೆ ಕರೆ ಕೊಟ್ಟಿದ್ದೇವೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇಲ್ಲಸಲ್ಲದ ಆರೋಪ ಮಾಡಲು ಹೊರಟಿದ್ದಾರೆ. ಹಾಗಾಗಿ, ಮುಖಂಡರಿಗೆ ಪ್ರತಿಭಟನೆಗೆ ಕರೆ ಕೊಡಲಾಗಿದೆ. ಇದು ಶಾಂತಿಯುತ ಪ್ರತಿಭಟನೆ ಎಂದರು.
ಕೆಲ ಕಿಡಿಗೇಡಿಗಳು ಕಲ್ಲು ಹೊಡೆಯುವ ಕೆಲಸ ಮಾಡುತ್ತಾರೆ. ಹಾಗಾಗಿ, ಸ್ವಲ್ಪ ಹುಷಾರಾಗಿ ಪ್ರತಿಭಟನೆ ಮಾಡಿ ಅಂತ ಹೇಳಿದ್ದೇನೆ. ನಮ್ಮದು ಗಾಂಧಿ ತತ್ವ. ಈ ದೇಶಕ್ಕೆ ಒಂದು ಸಂದೇಶ ಕೊಡಬೇಕು. ಎಐಸಿಸಿ ಪ್ರತಿಭಟನೆ ಬಗ್ಗೆ ಗೊತ್ತಿಲ್ಲ. ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ವರದಿ ಕೊಡಬೇಕು. ಹಾಗಾಗಿ, ಭೇಟಿ ಮಾಡಿದ್ದೆ, ಅಷ್ಟೇ ಎಂದು ಡಿಕೆಶಿ ತಿಳಿಸಿದರು.
ತುಂಗಭದ್ರಾ ಜಲಾಶಯಕ್ಕೆ ಗೇಟ್ ಅಳವಡಿಕೆ ವಿಚಾರವಾಗಿ ಮಾತನಾಡಿ, ಗೇಟ್ ಚೆನ್ನಾಗಿ ಅಳವಡಿಕೆ ಮಾಡಿದ್ದಾರೆ. ಗೇಟ್ ಅಳವಡಿಕೆಯೇ ಬಿಜೆಪಿಯವರಿಗೆ ಉತ್ತರ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಕಾರಜೋಳ, ಆರ್.ಅಶೋಕ್, ಕುಮಾರಸ್ವಾಮಿ ಏನು ಮಾತಾಡಿದರು ಎಂಬುದು ಗೊತ್ತಿದೆ. ಟೀಕೆಗಳು ಸತ್ತೋಯ್ತು, ಕೆಲಸ ಉಳಿದಿದೆ ಎಂದು ಡಿ ಕೆ ಶಿವಕುಮಾರ್ ಟಾಂಗ್ ಕೊಟ್ಟರು.