ಮನೆ ರಾಜ್ಯ ಹೂವಿನ ಹಡಗಲಿ ತಾ.ಪಂ ಗೆ ಅನ್ಯ ಇಲಾಖೆ ಅಧಿಕಾರಿ ನೇಮಕ ಖಂಡಿಸಿ ಪ್ರತಿಭಟನೆ

ಹೂವಿನ ಹಡಗಲಿ ತಾ.ಪಂ ಗೆ ಅನ್ಯ ಇಲಾಖೆ ಅಧಿಕಾರಿ ನೇಮಕ ಖಂಡಿಸಿ ಪ್ರತಿಭಟನೆ

0

ಮೈಸೂರು (Mysuru): ಅನ್ಯ ಇಲಾಖೆ ಅಧಿಕಾರಿಗಳನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಹುದ್ದೆಗೆ ನೇಮಕ ಮಾಡಿರುವುದನ್ನು ಖಂಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ಸಂಘದ ವತಿಯಿಂದ ತಾಲ್ಲೂಕು ಪಂಚಾಯಿತಿ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ನಂಜನಗೂಡು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕಪ್ಪುಪಟ್ಟಿ ಧರಿಸಿ  ಪ್ರತಿಭಟಿಸಿದ ಅಧಿಕಾರಿಗಳು ಹಾಗೂ ನೌಕರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜೆಸ್ಕಾಂ ಎಇಐರವರನ್ನು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನಿಯೋಜನೆ ಮಾಡಿರುವ ಆದೇಶವನ್ನು ರದ್ದುಪಡಿಸಿ, ಇಲಾಖೆಯ ಅಧಿಕಾರಿಗಳನ್ನೇ ನೇಮಕ ಮಾಡುವಂತೆ ಒತ್ತಾಯಿಸಿದರು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯು ಉಪವಿಭಾಗಾಧಿಕಾರಿಗಳಿಗೆ ಸಮಾನಾಂತರ ಹುದ್ದೆಯಾಗಿದ್ದು, ಅತ್ಯಂತ ಜವಬ್ದಾರಿಯುತವಾದ ಸ್ಥಾನವಾಗಿದೆ. ಆದರೆ , ಹಗರಿಬೊಮ್ಮನ ಹಳ್ಳಿಯಲ್ಲಿ ಜೆಸ್ಕಾಂನ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ವಿ)ರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್.ಪ್ರಕಾಶ್ ಅವರನ್ನು  ಗುತ್ತಿಗೆ ಆಧಾರದ ಮೇಲೆ ನೇಮಕಾತಿಯ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವರನ್ನು ಹೂವಿನ ಹಡಗಲಿಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನೇಮಿಸಿ ಸರ್ಕಾರ ಆಗಸ್ಟ್ ೨೫ ರಂದು ಆದೇಶ ಹೊರಡಿಸಿದೆ.

ಈ ಆದೇಶವನ್ನು ಖಂಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ನೌಕರರ ಸಂಘದ ವತಿಯಿಂದ  ಮೈಸೂರು ಜಿಲ್ಲಾ ವ್ಯಾಪ್ತಿಯ ಎಲ್ಲಾ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸಾಂಕೇತಿಕ ಧರಣಿ ಹಮ್ಮಿಕೊಂಡಿದ್ದು, ಅಂತೆಯೇ ನಂಜನಗೂಡು ತಾಲ್ಲೂಕು ಪಂಚಾಯಿತಿಯಲ್ಲಿಯೂ ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಅನ್ಯ ಇಲಾಖೆಯ ಅಧಿಕಾರಿಗಳ ನಿಯೋಜನೆ ಮಾಡುತ್ತಿರುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು. ಮತ್ತು ಇತರ ಇಲಾಖೆಯ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಹಿಂದಿರುಗಿಸಬೇಕೆಂದು ಒತ್ತಾಯಿಸಿದರು.

ಎಸ್.ಎಸ್.ಪ್ರಕಾಶ್ ಅವರ  ನೇಮಕಾತಿ ರದ್ದುಪಡಿಸದಿದ್ದಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ, ಅನಿರ್ಧಿಷ್ಟಾವಧಿ ಮುಷ್ಕರವನ್ನು ಸಂಘದ ವತಿಯಿಂದ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್,  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಪುರುಷೋತ್ತಮ್,  ಗಿರಿಧರ್, ಆರಾಧ್ಯ, ರಾಮಚಂದ್ರ, ಆಶಾ, ನಳಿನಾ ಸೇರಿದಂತೆ ೫೦ ಕ್ಕೂ ಹೆಚ್ಚುಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.