ಮೈಸೂರು(Mysuru): ಮೈಸೂರಿನ ಕುಡಿಯುವ ನೀರಿನ ಸರಬರಾಜನ್ನು ಮೈಸೂರು ಮಹಾನಗರ ಪಾಲಿಕೆ ಖಾಸಗಿಯವರಿಗೆ ವಹಿಸಬೇಕೆಂದು ಪ್ರಸ್ತಾಪ ಮಾಡುತ್ತಿರುವುದನ್ನು ಖಂಡಿಸಿ ಇಂದು ಮೈಸೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆ ಸದಸ್ಯರು ಪ್ರತಿಭಟನೆ ನಡೆಸಿದರು.
ಮೈಸೂರಿನ ರಾಜ ಮಹಾರಾಜರುಗಳು ಆಗಿನ ಕಾಲದಿಂದಲೂ ಮೈಸೂರಿನ ಜನತೆಗೆ ಮಾನವನ ಅತೀ ಮೂಲಭೂತ ಸೌಕರ್ಯಗಳಲೊಂದಾದ ಕುಡಿಯುವ ನೀರಿಗೆ ಬಹಳ ಆದ್ಯತೆ ನೀಡಿ, ತೊಂದರೆ ಆಗದಂತೆ ನೋಡಿಕೊಂಡು ಬಂದಿದ್ದಾರೆ. ಮೈಸೂರಿನಲ್ಲಿ ಮಹಾನಗರ ಪಾಲಿಕೆ ನೀರು ಸರಬರಾಜಿಗೆ ಖಾಸಗಿವರೆಗೆ ನೀಡುತ್ತೇವೆಂದು ಹೇಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಈಗಿನ ಬಿಜೆಪಿ ಸರ್ಕಾರ ಮಾತೆತ್ತಿದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನೆಲ್ಲ ಖಾಸಗೀಕರಣ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ. ಕೇಂದ್ರದಲ್ಲಿ ರೈಲು ನಿಲ್ದಾಣ ನಿರ್ವಹಣೆ ಸೇರಿದಂತೆ ಇನ್ನೂ ಅನೇಕ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಹಾಗೂ ಇದರಿಂದ ಸರ್ಕಾರ, ನಾಗರಿಕರ ಸರ್ಕಾರಿ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ನೀರು ಸರಬರಾಜು ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡುವುದರಿಂದ ಖರ್ಚು ವೆಚ್ಚಗಳು ಜಾಸ್ತಿಯಾಗುವ ಸಾಧ್ಯತೆ ಇದೆ. ಜನರಿಗೆ ಈಗಿನ ನೀರಿನ ದರಕ್ಕಿಂತ 2-3 ಪಟ್ಟು ಹೆಚ್ಚಾಗಿ ಅವರ ಮೇಲೆ ಹೆಚ್ಚಿನ ಹೊರೆಯಾಗಲಿದೆ. ಆದ್ದರಿಂದ ಇದು ಅವೈಜ್ಞಾನಿಕವಾಗಿದೆ ಹಾಗೂ ಜನ ವಿರೋಧಿ ಧೋರಣೆಯಾಗಿದೆ. ಮೈಸೂರು ಮಹಾನಗರ ಪಾಲಿಕೆ ಇಲ್ಲದ ಸಬೂಬು ಹೇಳಿ, ಜನರ ಹೆಸರಿನಲ್ಲಿ ಹಗಲು ದರೋಡೆ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಕುಡಿಯುವ ನೀರು ಸರಬರಾಜು ಪೂರೈಕೆಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡಬಾರದು ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಡಾ. ಶಾಂತರಾಜೇಅರಸ್, ಪ್ರಜೀಶ್ ಪಿ, ಕೃಷ್ಣಯ್ಯ ಸಿ ಎಚ್, ಡಾ. ಮೊಗಣ್ಣ, ಯೋಗೀಶ್ ಉಪ್ಪಾರ, ವಿಜಯೇಂದ್ರ, ಎಳನೀರು ರಾಮಣ್ಣ, ದರ್ಶನ್ ಗೌಡ, ನಾಗಣ್ಣ ಕೆ ಪಿ, ಮಲ್ಲೇಶ್ ಗೊರೂರು, ಸಿದ್ದರಾಜು, ಬಂಗಾರಪ್ಪ, ಡಾ. ನರಸಿಂಹೇಗೌಡ, ಪರಿಸರ ಚಂದ್ರು, ರಾಧಾ ಕೃಷ್ಣ, ಹನುಮಂತಯ್ಯ, ಅಂಬಾ ಅರಸ್, ದಿಲೀಪ್ ಆರ್, ನಂದಕುಮಾರ್, ಆಟೋ ರಾಜು, ರಾಮನಾಯಕ್, ರವಿ ನಾಯಕ್ ಉಪಸ್ಥಿತರಿದ್ದರು.