ಮನೆ ರಾಜ್ಯ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಡಿ.13 ರಂದು ಬೆಳಗಾವಿಯಲ್ಲಿ ಪ್ರತಿಭಟನೆ: ಬಸವ ಜಯಮೃತ್ಯುಂಜಯ...

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಡಿ.13 ರಂದು ಬೆಳಗಾವಿಯಲ್ಲಿ ಪ್ರತಿಭಟನೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

0

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಡಿ. 13 ರಂದು ಬೆಳಗಾವಿಯಲ್ಲಿ  ಲಿಂಗಾಯತ ಪಂಚಮಸಾಲಿ ಸಮುದಾಯವು ಪ್ರತಿಭಟನೆ ನಡೆಸಲಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ಕ್ಕೆ ಬೆಳಗಾವಿಯ ಗಾಂಧಿ ಭವನದಲ್ಲಿ ಜಮಾವಣೆಗೊಳ್ಳುವಂತೆ ಕರೆ ನೀಡಿದರು.

ಗಾಂಧಿ ಭವನದಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದರು.

ಪ್ರತಿಭಟನೆ ವೇಳೆ ಜನರು ಸುವರ್ಣಸೌಧಕ್ಕೆ ಹೋಗೋಣ ಅಂದರೆ ಸುವರ್ಣಸೌಧವರೆಗೆ ಪಾದಯಾತ್ರೆ ಮಾಡುತ್ತೇವೆ. ಹಿಂದಿನ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ನೀಡಿತ್ತು. ಆದರೆ ಜಾರಿ ಆಗಿಲ್ಲ. 2ಎ ಮೀಸಲಾತಿ ನೀಡುವ ಬಗ್ಗೆ ಸಿಎಂ ಸಭೆ ಕರೆದು ಚರ್ಚಿಸುವುದಾಗಿ ಹೇಳಿದ್ದರು. ಬಜೆಟ್ ಅಧಿವೇಶನ ವೇಳೆ ಸಿಎಂಗೆ ಸಭೆ ಕರೆಯುವಂತೆ ನಮ್ಮ ಸಮಾಜದ ಮುಖಂಡರು ಮನವಿ ಮಾಡಿದ್ದರು. ಆದರೆ ಸಿದ್ದರಾಮಯ್ಯ ನಮಗೆ ಸ್ಪಂದಿಸಿಲ್ಲ ಎಂದರು.

ಬೆಂಗಳೂರಲ್ಲಿ ಸಭೆ ಕರೆಯುವುದಾಗಿ ಹೇಳಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಮ್ಮ ಸಮಾಜದ ಬಾಂಧವರು ಬಹಳ ಜನ ಇದ್ದಾರೆ. ಅಧಿವೇಶನ ವೇಳೆ ಸಭೆ ಕರೆಯುವಂತೆ ಸಮಾಜದ ಶಾಸಕರು ಮನವಿ ಮಾಡಿದರೂ ಸಿಎಂ ಸ್ಪಂದಿಸಿಲ್ಲ. ಹೀಗಾಗಿ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆಗೆ ತೀರ್ಮಾನ ಮಾಡಲಾಗಿದೆ. ಬರಗಾಲ ಇರುವುದರಿಂದ ಜನರಿಗೆ ಪ್ರತಿಭಟನೆಗೆ ಬರುವಂತೆ ಒತ್ತಾಯ ಮಾಡುವುದಿಲ್ಲ. ಮೀಸಲಾತಿ ಹೋರಾಟದಲ್ಲಿ ಆಸಕ್ತಿ ಇರುವವರು ಬನ್ನಿ ಅಂತಾ ವಿನಂತಿ ಮಾಡುತ್ತೇನೆ ಎಂದರು.

ಮೂರು ದಿನಗಳೊಳಗೆ ನಮ್ಮ ಸಮುದಾಯ ಶಾಸಕರು ಅಧಿವೇಶನದಲ್ಲಿ ಧ್ವನಿ ಎತ್ತುವ ಪ್ರಯತ್ನ ಮಾಡಲಿ. ನಮ್ಮ ಸಮುದಾಯದ 20 ಶಾಸಕರು ಪಕ್ಷಾತೀತವಾಗಿ ಹೋರಾಟ ಮಾಡಲಿ. ನಾವು ಹೊರಗೆ ಪ್ರತಿಭಟನೆ ಮಾಡಿದರೆ ನೀವು ಸದನದಲ್ಲಿ ಧ್ವನಿ ಎತ್ತಿ ಎಂದು ಪಂಚಮಸಾಲಿ ಸಮುದಾಯದ ಶಾಸಕರಿಗೆ ಬಸವ ಜಯಮೃತ್ಯುಂಜಯ ಶ್ರೀ ಮನವಿ ಮಾಡಿದರು.

ಸಿಎಂ ಬೆಂಗಳೂರಿನಲ್ಲಿ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ. ಅಧಿವೇಶನ ವೇಳೆ ಸಭೆ ಕರೆದು ಚರ್ಚೆ ಮಾಡಬೇಕು. ನಮ್ಮ ಸಮುದಾಯದ ಇಬ್ಬರು ಸಚಿವರು, ಶಾಸಕರು ತಮಗೆ ಮನವಿ ಮಾಡಿದ್ದಾರೆ ಎಂದರು.