ಮನೆ ಸ್ಥಳೀಯ ನರೇಗಾ ಯೋಜನೆಯಡಿ ಹೆಚ್ಚಿನ ಉದ್ಯೋಗ ನೀಡಿ: ಸಿಇಓ ಕೆ.ಎಂ.ಗಾಯಿತ್ರಿ ಸಲಹೆ

ನರೇಗಾ ಯೋಜನೆಯಡಿ ಹೆಚ್ಚಿನ ಉದ್ಯೋಗ ನೀಡಿ: ಸಿಇಓ ಕೆ.ಎಂ.ಗಾಯಿತ್ರಿ ಸಲಹೆ

0

ಮೈಸೂರು : ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹೆಚ್ಚಿನ ಜನರಿಗೆ ಉದ್ಯೋಗವನ್ನು ಕಲ್ಪಿಸಿಕೊಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ.ಗಾಯಿತ್ರಿ ಅವರು ಸೂಚಿಸಿದರು.
ಬುಧವಾರ ತಾಲ್ಲೂಕಿನ ಮುತ್ತೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚಿಸಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಕೆರೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕು ಹಾಗೂ ಕೃಷಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬರ ಪೀಡಿತ ತಾಲ್ಲೂಕುಗಳನ್ನು ಈಗಾಗಲೇ ಗುರುತಿಸಿದ್ದು, ನರೇಗಾ ಯೋಜನೆಯಡಿ ಹೆಚ್ಚಿನ ಉದ್ಯೋಗವನ್ನು ಕಲ್ಪಿಸುವ ಮೂಲಕ ಬಡವರಿಗೆ ನೆರವಾಗಿ ಎಂದ ಅವರು, ಹಾಡಿಯ ಎಲ್ಲಾ ಜನರಿಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾಬ್ ಕಾರ್ಡ್ಗಳನ್ನು ಮಾಡಿಕೊಡುವಂತೆ ತಿಳಿಸಿದರು.

ಜೆಜೆಎಂ ಯೋಜನೆಯಡಿ ಪೈಪ್‌ ಲೈನ್‌ ಅಳವಡಿಸುವ ಕಾಮಗಾರಿ ಆರಂಭವಾಗಿದ್ದು, ಪೈಪ್‌ ಲೈನ್‌ ಅಳವಡಿಸಿದ ಬಳಿಕ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಈ ಕುರಿತು ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ತೆರಿಗೆ ವಸೂಲಾತಿಯನ್ನು ಕಡ್ಡಾಯವಾಗಿ ಪಿಓಎಸ್ ಮಿಷನ್ ಬಳಸಿ ಸಂಗ್ರಹಿಸಬೇಕು. ಪಂಚಾಯಿತಿ ಕಡೆಯಿಂದ ತೆರಿಗೆ ವಸೂಲಾತಿ ಸಂಬಂಧ ಅಭಿಯಾನ ನಡೆಸುವ ಮೂಲಕ ಸಾರ್ವಜನಿಕರಿಗೆ ತೆರಿಗೆ ಕರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಅಂತರ್ಜಲ ಸಂರಕ್ಷಣೆಯು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಅನಗತ್ಯವಾಗಿ ಬೋರ್ ವೆಲ್‌ ಗಳನ್ನು ಕೊರೆಸಬಾರದು. ಅಗತ್ಯವಿದ್ದ ಕಡೇ ಬೋರ್ ವೆಲ್‌ ಗಳನ್ನು ಕೊರೆಸಬೇಕು. ಸಾಧ್ಯವಾದಲ್ಲಿ ಇರುವ ಬೋರ್ ವೆಲ್‌ ಗಳನ್ನು ದುರಸ್ಥಿಪಡಿಸಿ ಬಳಸುವುದು ಉತ್ತಮ. ಆಗಾಗ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ಕುಡಿಯಲು ಯೋಗ್ಯವೇ ಎಂಬುದರ ಕುರಿತು ಮಾಹಿತಿ ನೀಡಬೇಕು ಎಂದು ಹೇಳಿದರು.

ಐಟಿಡಿಪಿ ಯೋಜನೆ ಹಾಗೂ ಪಿಆರ್‌ ಇಡಿ ಯೋಜನೆಯಡಿ ಕಾಮಗಾರಿಗಳ ಹಾಗೂ ಸಿಬ್ಬಂದಿ ವೇತನ ಸರಿಯಾಗಿ ನೀಡಲಾಗುತ್ತಿದೆಯೇ ಎಂಬುದರ ಕುರಿತು ಮಾಹಿತಿ ಪಡೆದರು.

ಸರ್ಕಾರಿ ಗಿರಿಜನ ಆಶ್ರಮ ಶಾಲೆ ಹಾಗೂ ಮುತ್ತೂರು ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿ ಕುರಿತು ಮಾರ್ಗದರ್ಶನ ನೀಡಿದರು.

ವಿಶೇಷ ತರಗತಿಗಳನ್ನು ಆರಂಭಿಸಲಾಗಿದೆಯೇ ಎಂಬುದಾಗಿ ಶಿಕ್ಷಕರಿಂದ ಮಾಹಿತಿ ಪಡೆದರು.
ಅಂಗನವಾಡಿ ಕಟ್ಟಡ, ಗಿರಿಜನ ಆಶ್ರಮಶಾಲೆ ವಸತಿ ಗೃಹ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿದರು.

ಬಳಿಕ ಬೆಟ್ಟದಪುರ ಗ್ರಾ.ಪಂ ಕಚೇರಿಗೆ ಭೇಟಿ ನೀಡಿ ಎನ್ ಆರ್ ಎಲ್ ಎಂ ಒಕ್ಕೂಟದ ಸದಸ್ಯರು ತಯಾರಿಸಿದಂತಹ ಮರುಬಳಕೆಯೆ ಬಟ್ಟೆ ಬ್ಯಾಗ್ ಗಳನ್ನು ವೀಕ್ಷಿಸಿ, ಮೆಚ್ಚುಗೆವ್ಯಕ್ತಪಡಿಸಿದರು. ನಂತರ ಪ್ರಗತಿಯಲ್ಲಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನಿಲ್‌ ಕುಮಾರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ರಂಜಿತ್, ಎಇಇ ಕೃಷ್ಣಮೂರ್ತಿ, ಪಿಆರ್‌ ಇಡಿ ಎಇಇ ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕರು(ಗ್ರಾ.ಉ) ಕರುಣಾಕರ್, ಸಹಾಯಕ ನಿರ್ದೇಶಕರು(ಪಂ.ರಾ) ಜಿ.ಸಿ.ಮಹಾದೇವ, ಪಿಡಿಓ ಸುರೇಶ್, ಗ್ರಾ.ಪಂ ಅಧ್ಯಕ್ಷ ಹರೀಶ್, ಸದಸ್ಯರಾದ ಸೈಯಾದ್ ನಾಸೀರ್, ನರಸಿಂಹ ಮೂರ್ತಿ ಸೇರಿದಂತೆ ಹಲವು ಉಪಸ್ಥಿತರಿದ್ದರು.