ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕೋಟಾದಡಿ ಸ್ಥಳೀಯ ಮೀಸಲಾತಿ ಒದಗಿಸುವುದು ಸಂವಿಧಾನದ 14ನೇ ವಿಧಿಯಡಿ ಒದಗಿಸಲಾದ ಸಮಾನತೆ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ.
ಕಟ್ಟುನಿಟ್ಟಾಗಿ ಅರ್ಹತೆಯ ಆಧಾರದ ಮೇಲೆ ಪ್ರವೇಶಾತಿ ಕಲ್ಪಿಸಬೇಕು ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಸುಧಾಂಶು ಧುಲಿಯಾ ಮತ್ತು ಎಸ್ ವಿ ಎನ್ ಭಟ್ಟಿ ಅವರಿದ್ದ ಪೀಠ ತಿಳಿಸಿತು.
“ನಾವೆಲ್ಲರೂ ಭಾರತದಲ್ಲಿ ನೆಲೆಸಿದ್ದೇವೆ ಮತ್ತು ಯಾವುದೇ ಪ್ರಾಂತೀಯತೆ ಸ್ಥಳೀಯತೆ ಇತ್ಯಾದಿಗಳಿಲ್ಲ. ಇದು ನಮಗೆ ಭಾರತದಾದ್ಯಂತ ಉದ್ಯೋಗ ಮುಂದುವರಿಸುವ ಹಕ್ಕನ್ನು ನೀಡುತ್ತದೆ. ಕೆಲವು ಪ್ರದೇಶಗಳಲ್ಲಿ ವಾಸಿಸುವವರಿಗೆ ಶಿಕ್ಷಣದಲ್ಲಿ ಮೀಸಲಾತಿಯ ಸೌಲಭ್ಯವನ್ನು ಎಂಬಿಬಿಎಸ್‌ನ ಕೆಲವು ಸಂದರ್ಭಗಳಲ್ಲಿ ಮಾತ್ರ ನೀಡಬಹುದು. ಆದರೆ ಸ್ಥಳೀಯತೆ ಆಧಾರದ ಮೇಲೆ ಉನ್ನತ ಮಟ್ಟದಲ್ಲಿ ಮೀಸಲಾತಿ ನೀಡುವುದು 14ನೇ ವಿಧಿಯ ಉಲ್ಲಂಘನೆಯಾಗುತ್ತದೆ” ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಆದರೂ, ಇಂದಿನ ತೀರ್ಪು ಈಗಾಗಲೇ ಸ್ಥಳೀಯತೆ ಆಧಾರಿತ ವರ್ಗದ ಅಡಿಯಲ್ಲಿ ನೀಡಲಾದ ಮೀಸಲಾತಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ದ್ವಿಸದಸ್ಯ ಪೀಠ 2019ರಲ್ಲಿ ನೀಡಿದ್ದ ಉಲ್ಲೇಖ ಆಧರಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ. ಚಂಡೀಗಢದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸ್ನಾತಕೋತ್ತರ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಗಳ ವಿಚಾರಣೆಯ ಸಂದರ್ಭದಲ್ಲಿ ಸ್ಥಳೀಯ ಮೀಸಲಾತಿಗೆ ಸಂಬಂಧಿಸಿದ ಕೆಲ ಕಾನೂನು ಪ್ರಶ್ನೆಗಳು ತಲೆಎತ್ತಿದ್ದವು.
ಚಂಡೀಗಢ ಕೇಂದ್ರಾಡಳಿತ ಪ್ರದೇಶ ಸರ್ಕಾರದ ಕೋಟಾದಡಿ ಒದಗಿಸಲಾದ ಸ್ಥಳೀಯತೆ ಅಥವಾ ಸ್ಥಳೀಯತೆ ಆಧಾರಿತ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜು ತನ್ನ ಪ್ರಾಸ್ಪೆಕ್ಟಸ್‌ನಲ್ಲಿ ಮಾಡಿದ ಕೆಲ ನಿಬಂಧನೆಗಳನ್ನು ಅಮಾನ್ಯವಾದಂತಹವು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.