ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ (ಕೆಪಿಟಿಸಿಎಲ್) 404 ಸಹಾಯಕ ಎಂಜಿನಿಯರ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅರ್ಹ ಅಭ್ಯರ್ಥಿಗಳಿಗೆ ತಾತ್ಕಾಲಿಕ ನೇಮಕಾತಿ ಆದೇಶ ನೀಡುವಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
ನೇಮಕಾತಿ ಸಂಬಂಧ ಕೆಪಿಟಿಸಿಎಲ್ 2023ರ ಫೆಬ್ರವರಿ 4ರಂದು ಪ್ರಕಟಿಸಿದ್ದ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ರದ್ದುಪಡಿಸಿ ಏಕಸದಸ್ಯ ಪೀಠ ನೀಡಿದ ಆದೇಶ ಪ್ರಶ್ನಿಸಿ ಆ ಪಟ್ಟಿಯಲ್ಲಿ ಅರ್ಹತೆ ಪಡೆದುಕೊಂಡಿದ್ದ ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಜಿ ಶ್ರುತಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಮೇಲ್ಮನವಿದಾರರು, ರಾಜ್ಯ ಸರ್ಕಾರ, ಕೆಪಿಟಿಸಿಎಲ್, ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರದ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ಪೀಠವು 2023ರ ಜನವರಿ 3ರಂದು ಪ್ರಕಟಿಸಿದ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಅಂಕ ಪಟ್ಟಿಯಂತೆ 404 (313 ಮೂಲ ವೃಂದ, 91 ಕಲ್ಯಾಣ ಕರ್ನಾಟಕ ವೃಂದ) ಅಭ್ಯರ್ಥಿಗಳಿಗೆ ತಾತ್ಕಾಲಿಕ ನೇಮಕಾತಿ ಆದೇಶ ನೀಡುವಂತೆ ಕೆಪಿಟಿಸಿಎಲ್‌ಗೆ ನಿರ್ದೇಶನ ನೀಡಿದೆ. ಈ ತಾತ್ಕಾಲಿಕ ನೇಮಕಾತಿಗಳು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಡುತ್ತವೆ ಎಂದು ನೇಮಕಾತಿ ಆದೇಶಗಳಲ್ಲಿ ನಮೂದಿಸಬೇಕು. ಒಂದೊಮ್ಮೆ ಮೇಲ್ಮನವಿ ಪುರಸ್ಕೃತಗೊಂಡು ಮೇಲ್ಮನವಿದಾರರು ಆಯ್ಕೆಗೊಂಡರೆ ಸೇವಾ ಹಿರಿತನ ಮತ್ತು ರೋಸ್ಟರ್ ಪಾಲಿಸಬೇಕು ಎಂದು ಹೇಳಿರುವ ಪೀಠವು ವಿಚಾರಣೆಯನ್ನು ಮಾರ್ಚ್ 13ಕ್ಕೆ ಮುಂದೂಡಿದೆ.
ಕೆಪಿಟಿಸಿಎಲ್‌ನಲ್ಲಿ ಖಾಲಿ ಇರುವ ಸಹಾಯಕ ಎಂಜಿನಿಯರ್ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2022ರ ಆಗಸ್ಟ್ 24ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಆಗಸ್ಟ್ 25ಕ್ಕೆ ಕೀ ಉತ್ತರ ಪ್ರಕಟಿಸಿತ್ತು. ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 2ರವರೆಗೆ ಅವಕಾಶ ನೀಡಲಾಗಿತ್ತು. ಕೀ ಉತ್ತರ ಪಟ್ಟಿಯಲ್ಲಿ ಕೆಲವು ಉತ್ತರಗಳು ತಪ್ಪಾಗಿವೆ ಎಂದು ಹಲವು ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಿದ್ದರು. ಇದಕ್ಕೆ ಪರೀಕ್ಷಾ ಪ್ರಾಧಿಕಾರ ತಜ್ಞರ ಸಮಿತಿ ರಚಿಸಿ ಅದರ ಪರಿಶೀಲನೆ ಬಳಿಕ ನವೆಂಬರ್ 22ರಂದು ಅಂತಿಮ ಕೀ ಉತ್ತರಗಳ ಪಟ್ಟಿ ಪ್ರಕಟಿಸಿತ್ತು. ಡಿಸೆಂಬರ್ 27ರಂದು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಅದರ ಆಧಾರದಲ್ಲಿ 2023ರ ಜನವರಿ 3ರಂದು ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿತ್ತು. ಅದರಲ್ಲಿ 501 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದು, 404 ಅಭ್ಯರ್ಥಿಗಳ ತಾತ್ಕಲಿಕ ಪಟ್ಟಿ ಪ್ರಕಟಿಸಲಾಗಿತ್ತು.
ಈ ಮಧ್ಯೆ, ಪರಿಷ್ಕೃತ ಕೀ ಉತ್ತರ ಪಟ್ಟಿಗೆ 900ಕ್ಕೂ ಹೆಚ್ಚು ಆಕ್ಷೇಪಣೆಗಳು ವ್ಯಕ್ತವಾದವು. ಅದಕ್ಕೆ ಪುನಾ ತಜ್ಞರ ಸಮಿತಿಯ ಪರಿಶೀಲನೆಗೊಳಪಡಿಸಲಾಯಿತು. ಹೆಚ್ಚುವರಿ ಅಂಕಗಳನ್ನು ನೀಡಿ 2023ರ ಫೆಬ್ರವರಿ 4ರಂದು ಪರಿಷ್ಕೃತ ಪಟ್ಟಿ ಪ್ರಕಟಿಸಲಾಯಿತು. ಇದರ ಪರಿಣಾಮ 135 ಅಭ್ಯರ್ಥಿಗಳು ಅರ್ಹತೆ ಪಡೆದು, ಒಟ್ಟು ತಾತ್ಕಾಲಿಕ ಅರ್ಹ ಅಭ್ಯರ್ಥಿಗಳ ಸಂಖ್ಯೆ 636 ಆಯಿತು. ಎರಡನೇ ಬಾರಿ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದ್ದನ್ನು ಆಕ್ಷೇಪಿಸಿ ಮೊದಲ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಎರಡನೇ ಪರಿಷ್ಕರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಪಡಿಸಿತ್ತು. ಇದರಿಂದ ಅರ್ಹತಾ ಪಟ್ಟಿಯಿಂದ ವಂಚಿತರಾದ 135 ಅಭ್ಯರ್ಥಿಗಳ ಪೈಕಿ 50ಕ್ಕೂ ಅಧಿಕ ಅಭ್ಯರ್ಥಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.