ಮಂಡ್ಯ : ಮದ್ದೂರು ಪಟ್ಟಣಕ್ಕೆ ಭೇಟಿ ನೀಡಿದ್ದ, ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದಡಿಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಗಣೇಶ ಮೆರವಣಿಗೆ ವೇಳೆ ನಡೆದಿದ್ದ, ಕಲ್ಲು ತೂರಾಟದ ಬಳಿಕ ನೆನ್ನೆ (ಗುರುವಾರ) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮದ್ದೂರಿಗೆ ಭೇಟಿ ನೀಡಿದ್ದರು. ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಭಾಷಣದ ವೇಳೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಮದ್ದೂರು ಪೊಲೀಸ್ ಸಬ್ಇನ್ಸ್ಪೆಕ್ಟರ್ ಮಂಜುನಾಥ್ ಅವರ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಬಿಎನ್ಎಸ್ ಸೆಕ್ಷನ್ 196(1)(ಚಿ), 299, 353(2) ಅನ್ಯಕೋಮಿಗೆ ಧಕ್ಕೆ ಹಾಗೂ ಕೋಮುಗಳ ನಡುವೆ ವೈರತ್ವ ಉಂಟುಮಾಡುವ ಭಾಷಣ ಮಾಡಿರುವ ಆರೋಪದಡಿ ಎಫ್ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.














