ಮನೆ ಅಪರಾಧ ಪ್ರಚೋದನಾಕಾರಿ ಹೇಳಿಕೆ: ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್​ಐಆರ್

ಪ್ರಚೋದನಾಕಾರಿ ಹೇಳಿಕೆ: ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್​ಐಆರ್

0

ಯಾದಗಿರಿ, ಸೆಪ್ಟೆಂಬರ್ 25: ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಯಾದಗಿರಿಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Join Our Whatsapp Group

ಶಹಾಪುರ ಗಣೇಶ ವಿಸರ್ಜನಾ ಶೋಭಾ ಯಾತ್ರೆ ವೇಳೆ ಪ್ರತಾಪ್ ಸಿಂಹ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

ಇದೇ 21ರಂದು ಹಿಂದೂ ಮಹಾ ಗಣಪತಿ ವಿಸರ್ಜನಾ ಶೋಭಾ ಯಾತ್ರೆಯಲ್ಲಿ ಪ್ರತಾಪ್ ಸಿಂಹ ಭಾಗಿಯಾಗಿ ಭಾಷಣ ಮಾಡಿದ್ದರು. ಆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರನ್ನು ಉದ್ದೇಶಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪ ಅವರ ಮೇಲಿದೆ.

ಪ್ರತಾಪ್ ಸಿಂಹ ಹೇಳಿದ್ದೇನೆ?

ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಪ್ರತಾಪ್ ಸಿಂಹ, ಗಣೇಶ ವಿಸರ್ಜನೆ ವೇಳೆ ಎಲ್ಲಾ ಕಡೆ ಕಲ್ಲುತೂರಾಟ ಮಾಡುವ ಪ್ರವೃತ್ತಿ ಕಾಣಿಸುತ್ತಾ ಇದೆ. ಕಲ್ಲು ಹೊಡೆಯುವ ಪ್ರವೃತ್ತಿ ಮುಸ್ಲಿಮರಿಗೆ ಮಾತ್ರ ಯಾಕೆ ಬರುತ್ತದೆ? ಹಿಂದುಗಳು ಎಲ್ಲರೂ ಕೈಯಲ್ಲಿ ಒಂದೊಂದು ಕಲ್ಲು ಹಿಡಿದುಕೊಂಡರೆ ನಿಮ್ಮ (ಮುಸ್ಲಿಮರನ್ನು ಉದ್ದೇಶಿಸಿ) ಕಥೆ ಏನು ಆಗುತ್ತದೆ ಗೊತ್ತೇ ಎಂದು ಪ್ರಶ್ನಿಸಿದ್ದರು.

ಪರಮಾಣು ಬಾಂಬ್ ಸಿದ್ಧಪಡಿಸುವುದನ್ನು ಕಂಡುಹಿಡಿದ ಹಿಂದುಗಳಿಗೆ ಪೆಟ್ರೋಲ್ ಬಾಂಬ್ ತಯಾರಿಸಲು ಬರುವುದಿಲ್ಲವೇ? ಟಾಂಗಾಗಳು, ಗುಜರಿಗಳು ಮಾಡುವ ಕೆಲಸವನ್ನು ಕ್ಷಣಮಾತ್ರದಲ್ಲಿ ಮಾಡಲು ಹಿಂದುಗಳಿಗೆ ಬರುತ್ತದೆ ಎಂದು ಹೇಳಿದ್ದರು.

ಪ್ರತಾಪ್ ಸಿಂಹ, ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡುವಂತಹ ಹೇಳಿಕೆ ನೀಡಿದ್ದಾರೆ ಎಂದು ಮುಸ್ಲಿಮರು ಆರೋಪಿಸಿದ್ದರು. ಪ್ರತಾಪ್ ಸಿಂಹ ಗಲಭೆಗೆ ಕಾರಣವಾಗುವಂತಹ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಮುಸ್ಲಿಮರು ಆರೋಪಿಸಿದ್ದರು. ಈ ಸಂಬಂಧ ಅವರ ವಿರುದ್ಧ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಹಾಪುರ ಪಿಎಸ್ಐ ಡಿವಿ ನಾಯಕ ಅವರು ಪ್ರತಾಪ್ ಸಿಂಹ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಂಹ ಜೊತೆಗೆ ಇತರ ಇವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಬಿಎನ್ಎಸ್ ಕಾಯ್ದೆಯ ಸೆಕ್ಷನ್ 299, 192 ಅಡಿ ಕೇಸ್ ದಾಖಲಿಸಲಾಗಿದೆ.