ಮನೆ ಕಾನೂನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪಿ ಎಸ್‌ ದಿನೇಶ್‌ ಕುಮಾರ್‌ ನೇಮಕ

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪಿ ಎಸ್‌ ದಿನೇಶ್‌ ಕುಮಾರ್‌ ನೇಮಕ

0

ಕರ್ನಾಟಕ ಹೈಕೋರ್ಟ್‌ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪಿ ಎಸ್‌ ದಿನೇಶ್‌ ಕುಮಾರ್‌ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ರಾಷ್ಟ್ರಪತಿಯವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರ ಬುಧವಾರ ಅಧಿಸೂಚನೆ ಪ್ರಕಟಿಸಿದೆ.

ಫೆಬ್ರವರಿ 24ರಂದು ನ್ಯಾ. ದಿನೇಶ್‌ ಕುಮಾರ್‌ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ. ನ್ಯಾಯಮೂರ್ತಿ ದಿನೇಶ್‌ ಕುಮಾರ್ ಅವರು 2015ರಿಂದ ಕರ್ನಾಟಕ ಹೈಕೋರ್ಟ್‌ ನ ನ್ಯಾಯಾಧೀಶರಾಗಿದ್ದಾರೆ. ಕೇವಲ 24 ದಿನಗಳ ಕಾಲ ಮುಖ್ಯ ನ್ಯಾಯಮೂರ್ತಿಯಾಗಿರಲಿರುವ ನ್ಯಾ. ದಿನೇಶ್‌ ಕುಮಾರ್‌ ಅವರು ಇತ್ತೀಚಿನ ವರ್ಷಗಳಲ್ಲಿಯೇ ಅತಿ ಕಡಿಮೆ ಅವಧಿಗೆ ಸಿಜೆ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಜನವರಿ 19ರಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಂಚ್ರ ವರಾಳೆ ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಿದ ಸಂದರ್ಭದಲ್ಲಿ, ಅವರ ಪದೋನ್ನತಿಯಿಂದ ತೆರವಾಗುವ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನ್ಯಾ. ಪಿ ಎಸ್‌ ದಿನೇಶ್‌ ಕುಮಾರ್‌ ಅವರ ಹೆಸರನ್ನು ಕೊಲಿಜಿಯಂ ಶಿಫಾರಸ್ಸು ಮಾಡಿತ್ತು.

ಆದರೆ, ಜನವರಿ 24ರಂದು ಕೇಂದ್ರ ಸರ್ಕಾರವು ನ್ಯಾ. ದಿನೇಶ್‌ ಕುಮಾರ್‌ ಅವರನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿ ಅಧಿಸೂಚನೆ ಪ್ರಕಟಿಸಿತ್ತು.

“ಹೈಕೋರ್ಟ್‌ ನ್ಯಾಯಾಧೀಶರಾಗಿ ನ್ಯಾಯಾಂಗ ಮತ್ತು ಆಡಳಿತಾತ್ಮಕ ಭಾಗದಲ್ಲಿ ಸಾಕಷ್ಟು ಅನುಭವವನ್ನು ನ್ಯಾ. ದಿನೇಶ್‌ ಕುಮಾರ್‌ ಗಳಿಸಿದ್ದಾರೆ. ಫೆಬ್ರವರಿ 24, 2024 ರಂದು ನ್ಯಾ. ದಿನೇಶ್‌ ಕುಮಾರ್‌ ನಿವೃತ್ತರಾಗಲಿದ್ದು, ಮುಖ್ಯ ನ್ಯಾಯಮೂರ್ತಿಯಾಗಿ ಒಂದು ತಿಂಗಳಿಗಿಂತ ಸ್ವಲ್ಪ ಹೆಚ್ಚು ಅಧಿಕಾರಾವಧಿಯನ್ನು ಹೊಂದಿರುತ್ತಾರೆ. ಅವರು ಉತ್ಕೃಷ್ಟ ಸಮಗ್ರತೆ, ಪ್ರಾಮಾಣಿಕತೆ ಮತ್ತು ಸಾಮರ್ಥ್ಯಗಳಿಂದ ಗಮನಸೆಳೆದವರಾಗಿದ್ದಾರೆ. ನೇಮಕವಾದಾಗಿನಿಂದ ಕರ್ನಾಟಕ ಹೈಕೋರ್ಟ್‌ ನಲ್ಲಿ ನ್ಯಾ. ದಿನೇಶ್‌ ಕುಮಾರ್‌ ಮಹತ್ತರ ಸೇವೆ ಸಲ್ಲಿಸಿದ್ದಾರೆ” ಎಂದು ಜನವರಿ 19ರಂದು ಪ್ರಕಟಿಸಿದ್ದ ನಿರ್ಣಯದಲ್ಲಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ತಿಳಿಸಿತ್ತು.

ಹಿಂದಿನ ಲೇಖನಮಂಡ್ಯದಲ್ಲಿ ಬೆಂಕಿ ಹಚ್ಚಲು ಬಿಜೆಪಿ ಮತ್ತು ಜೆಡಿಎಸ್ ​ಗೆ ಸಾಧ್ಯವಿಲ್ಲ: ಚಲುವರಾಯಸ್ವಾಮಿ
ಮುಂದಿನ ಲೇಖನಲೋಕಸಭೆ ಚುನಾವಣೆ ನಂತರ 5 ಗ್ಯಾರಂಟಿ ರದ್ದು; ಶಾಸಕರ ಮೂಲಕವೇ ಕಾಂಗ್ರೆಸ್ ಈ ಮಾತು ಹೇಳಿಸಿದೆ- ನಿಖಿಲ್ ಕುಮಾರಸ್ವಾಮಿ ನೇರ ಆರೋಪ