ತುಮಕೂರು : ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ವಾಹನ ಬಿಡುಗಡೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ತುಮಕೂರು ಗ್ರಾಮಾಂತರ ಪಿಎಸ್‌ಐ ಚೇತನ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ಮೂಲದ ವಕೀಲರ ವಾಹನ ಇದಾಗಿದ್ದು, ವಾಹನ ಬಿಡುಗಡೆಗೆ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕ್ಯಾತಸಂದ್ರ ಬಳಿಯ ನಮಸ್ತೆ ತುಮಕೂರು ಹೋಟೆಲ್‌ನಲ್ಲಿ 40 ಸಾವಿರ ರೂ. ಲಂಚ ಪಡದುಕೊಳ್ಳುತ್ತಿದ್ದಾಗ ಪಿಎಸ್‌ಐ ಚೇತನ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಪೊಲೀಸರು, ಪಿಎಸ್‌ಐಯನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಈಚೆಗೆ ಚೀಟಿ ಅವ್ಯವಹಾರ ಪ್ರಕರಣದಲ್ಲಿ ಲಂಚ ಸ್ವೀಕರಿಸುವಾಗ ಬೆಂಗಳೂರಲ್ಲಿ ಇನ್‌ಸ್ಪೆಕ್ಟರ್‌ವೊಬ್ಬರು ಲೋಕಾಯುಕ್ತ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಸಿನಿಮೀಯ ರೀತಿಯಲ್ಲಿ ಇನ್‌ಸ್ಪೆಕ್ಟರ್‌ರನ್ನು ಲೋಕಾಯುಕ್ತ ಟ್ರ್ಯಾಪ್ ಮಾಡಿತ್ತು.
ಇನ್‌ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್‌ಗೆ ಒಳಗಾಗಿದ್ದರು. ಟ್ರ್ಯಾಪ್‌ಗೂ ಮುನ್ನ ಆರೋಪಿಗಳ ಬಂಧನಕ್ಕೆ ತೆರಳಿದ್ದ ಇನ್ಸ್ಪೆಕ್ಟರ್, ಚೀಟಿ ವ್ಯವಹಾರದಲ್ಲಿ ವಂಚನೆ ಸಂಬಂಧ ಬಂಧನ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಐದು ಲಕ್ಷ ಹಣಕ್ಕೆ ಬೇಡಿಕೆಯಿಟ್ಟು, ಮುಂಗಡ 1 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.















