ಬೆಂಗಳೂರು (Bengaluru)-ಪಿಎಸ್ಐ (PSI) ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿರುವ ಆಡಿಯೋ ಬಗ್ಗೆ ತನಿಖೆಯಾಗುತ್ತದೆ ಎಂದು ಮುಖ್ಯಮಂತ್ರಿ (Chief Minister) ಬಸವರಾಜ ಬೊಮ್ಮಾಯಿ (Basavaraja Bommai) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಸ್ತುಗಳ ಬಗ್ಗೆ ತನಿಖೆಯಾಗುತ್ತದೆ. ಆಡಿಯೋದಲ್ಲಿದೆ ಏನಿದೆ ಎಂದು ನಾನು ಕೇಳಿಸಿಕೊಂಡಿಲ್ಲ. ಆಡಿಯೋದಲ್ಲಿ ಇಬ್ಬರ ಮಧ್ಯೆ ಮಾತುಕತೆಯಾಗಿದೆ ಎಂದು ಹೇಳಲಾಗುತ್ತಿದ್ದು, ಇಬ್ಬರು ಯಾರು, ಅವರ ಅರ್ಹತೆಯೇನು, ನಿಖರತೆಯೇನು ಎಂದು ತನಿಖೆಯಿಂದ ಹೊರಬರುತ್ತದೆ. ಆಡಿಯೋವನ್ನು ಕೂಡ ತನಿಖೆಗೆ ಒಳಪಡಿಸಲಾಗುವುದು. ಯಾರೇ ತಪ್ಪಿತಸ್ಥರಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ದೆಹಲಿಯಲ್ಲಿ ಮುಂದಿನ ವಾರ ಮುಖ್ಯ ನ್ಯಾಯಮೂರ್ತಿಗಳು ಮತ್ತು ಮುಖ್ಯಮಂತ್ರಿಗಳ ಸಮ್ಮೇಳನವಿದೆ. ಅದಕ್ಕಾಗಿ ನಾನು ಹೋಗುತ್ತೇನೆ ಎಂದರು.
ಪಾಕಿಸ್ತಾನದಿಂದ ಇಮೇಲ್ ಬಂದಿರುವ ವಿಚಾರ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ಆಗಾಗ ಶಾಂತಿ ಕದಡಲು ಈ ರೀತಿಯ ಪ್ರಯತ್ನಗಳು ಆಗುತ್ತಿರುತ್ತವೆ. ಈ ಹಿಂದೆ ಕೂಡ ಈ ರೀತಿಯ ಘಟನೆಗಳು ನಡೆದಿವೆ. ಗಂಭೀರವಾಗಿ ತೆಗೆದುಕೊಂಡು ಪತ್ತೆಹಚ್ಚಿ ತನಿಖೆ ಮಾಡುತ್ತೇವೆ ಎಂದರು.