ಬೆಂಗಳೂರು(Bengaluru): ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪ್ರಮುಖ 8 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.
ಪ್ರಕರಣದ ಕಿಂಗ್ ಪಿನ್ ಎನಿಸಿಕೊಂಡಿರುವ ಆರ್.ಡಿ.ಪಾಟೀಲ್ಗೆ ಹಣ ನೀಡಿ ಒಪ್ಪಂದ ಮಾಡಿಕೊಂಡಿದ್ದ ಆರೋಪದಡಿ ಶರಣ ಬಸವೇಶ್ವರ ಆರ್ಟ್ಸ್, ಸೈನ್ಸ್, ಕಾಮರ್ಸ್ ಕಾಲೇಜು ಹಾಗೂ ಎಂ.ಎಸ್ ಇರಾನಿ ಕಾಲೇಜಿನಲ್ಲಿ ಪರೀಕ್ಷೆ ಎದುರಿಸಿದ್ದ ಅಭ್ಯರ್ಥಿಗಳಾದ ಕಲ್ಲಪ್ಪ, ಸಿದ್ದುಗೌಡ, ಈರಪ್ಪ, ಸೋಮನಾಥ, ರವಿರಾಜ, ಶ್ರೀಶೈಲ, ಭಗವಂತ್ ರಾಯ್ ನನ್ನ ವಶಕ್ಕೆ ಪಡೆಯಲು ಸಿದ್ಧತೆ ನಡೆಸಲಾಗಿದೆ.
ಆರೋಪಿಗಳ ಪೈಕಿ ಸಿದ್ಧುಗೌಡ – ಆರ್.ಡಿ ಪಾಟೀಲ್ ಸಂಬಂಧಿ ಹಾಗೂ ಹೆಲ್ತ್ ಡಿಪಾರ್ಟ್ಮೆಂಟ್ನಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಕಲ್ಲಪ್ಪ- ಪೊಲೀಸ್ ಕಾನ್ಸ್ಟೇಬಲ್, ಸೋಮನಾಥ- ವ್ಯವಸಾಯ ಮಾಡಿಕೊಂಡಿದ್ದ. ಇನ್ನು ವಿಜಯ್ ಕುಮಾರ್ – ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ರವಿರಾಜ- ಮೊದಲ ರ್ಯಾಂಕ್ ಪಡೆದಿರುವ ಆರೋಪಿ. ಶ್ರೀಶೈಲ- ಪದವೀಧರನಾಗಿದ್ದು, ಪಿಎಸ್ಐ ಹುದ್ದೆಗಾಗಿ ಡೀಲ್ ಮಾಡಿದ್ದ ಆರೋಪವಿದೆ.
ಭಗವಂತರಾಯ್ – ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರೆ, ಈರಪ್ಪ- ಅಡುಗೆ ಭಟ್ಟನಾಗಿ ಕೆಲಸ ಮಾಡಿಕೊಂಡಿದ್ದ. ಈ 8 ಮಂದಿ ಅಭ್ಯರ್ಥಿಗಳಿಂದ ಒಟ್ಟು 6 ಕೋಟಿ ಹಣವನ್ನು ಆರ್.ಡಿ.ಪಾಟೀಲ್ ಸಂಗ್ರಹಿಸಿ ಎಲ್ಲರಿಗೂ ಬ್ಲ್ಯೂಟೂತ್ ಡಿವೈಸ್ ನೀಡಿರುವುದು ತನಿಖೆ ವೇಳೆ ಬಯಲಾಗಿದೆ.