ಬೆಂಗಳೂರು (Bengaluru): ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಎಡಿಜಿಪಿ ಅಮೃತ್ ಪೌಲ್ ರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಅಲ್ಲದೆ, ಅಮೃತ್ ಪೌಲ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ (ಜು.16) ಮುಂದೂಡಿದೆ. ಪೊಲೀಸ್ ನೇಮಕಾತಿ ವಿಭಾದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ರ ಸಿಐಡಿ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು 1ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿದ್ದು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಎಡಿಜಿಪಿ ಅಮೃತ್ ಪೌಲ್ ಹಾಗೂ ಆರೋಪಿ ಶಾಂತಕುಮಾರ್ ನಡುವೆ 1.36 ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿದೆ. ಇನ್ನು ಮೊಬೈಲ್ ದತ್ತಾಂಶವನ್ನು ಅಳಿಸಿ ಹಾಕಲಾಗಿದೆ ಎಂದು ಸಿಐಡಿ ಆರೋಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಮೂರು ಬಾರಿ ವಿಚಾರಣೆ ಎದುರಿಸಿದ್ದ ಅಮೃತ್ ಪೌಲ್ ರನ್ನು ಜುಲೈ 4ರಂದು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.
ಹಗರಣದಲ್ಲಿ ಪೌಲ್ ಸೇರಿದಂತೆ 79 ಜನರನ್ನು ಬಂಧಿಸಿರುವ ಸಿಐಡಿ ಇದುವರೆಗೆ ಎಂಟು ಎಫ್‌ಐಆರ್‌ಗಳನ್ನು ದಾಖಲಿಸಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರು ನೇಮಕಾತಿ ಎಡಿಜಿಪಿ ಆಗಿದ್ದ ಸಂದರ್ಭದಲ್ಲಿ ಪರೀಕ್ಷೆಗಳು ನಡೆದಿದ್ದವು. ಹಗರಣ ಹೊರಬಿದ್ದ ಕೂಡಲೇ ಸರ್ಕಾರವು ಪೌಲ್‌ನನ್ನು ಆಂತರಿಕ ಭದ್ರತಾ ವಿಭಾಗಕ್ಕೆ (ಐಎಸ್‌ಡಿ) ವರ್ಗಾಯಿಸಿತ್ತು.
545 ಪಿಎಸ್‌ಐ ಹುದ್ದೆಗಳ ಡೀಲ್ ನಡೆದಾಗ ಅಮೃತ್ ಪೌಲ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರು. ಡಿವೈಎಸ್‌ಪಿ ಹಾಗೂ ಎಫ್‌ಡಿಎಯೊಂದಿಗೆ ಸೇರಿ ಅಮೃತ್ ಪೌಲ್ ಡೀಲ್ ಮಾಡಿಸಿದ್ದಾರೆ ಎಂಬ ಆರೋಪವಿದೆ.