ಮನೆ ರಾಜ್ಯ ಪಿಎಸ್‌ಐ ಹಗರಣ: ಡಿವೈಎಸ್‌ಪಿ ಶಾಂತಕುಮಾರ್‌ 12 ದಿನ ಸಿಐಡಿ ಕಸ್ಟಡಿಗೆ

ಪಿಎಸ್‌ಐ ಹಗರಣ: ಡಿವೈಎಸ್‌ಪಿ ಶಾಂತಕುಮಾರ್‌ 12 ದಿನ ಸಿಐಡಿ ಕಸ್ಟಡಿಗೆ

0

ಬೆಂಗಳೂರು (Bengaluru)-ಪಿಎಸ್‌ಐ ನೇಮಕ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಡಿವೈಎಸ್‌ಪಿ ಶಾಂತಕುಮಾರ್‌ ಅವರನ್ನು ಹೆಚ್ಚಿನ ವಿಚಾರಣೆಗಾಗಿ 12 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿದೆ.

ಆರೋಪಿ ಡಿವೈಎಸ್ಪಿ ಶಾಂತಕುಮಾರ್‌ ಅವರನ್ನು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ನ್ಯಾಯಾಲಯ 12 ದಿನ ಕಸ್ಟಡಿಗೆ ನೀಡಿ ಆದೇಶಿಸಿದೆ.

ಸುಮಾರು 11 ವರ್ಷಗಳಿಂಂದ ನೇಮಕಾತಿ ವಿಭಾಗದಲ್ಲಿಯೇ ಡಿವೈಎಸ್ಪಿ ಶಾಂತಕುಮಾರ್‌ ಠಿಕಾಣಿ ಹೂಡಿದ್ದರು. ಹೀಗಾಗಿ, ಶಾಂತಕುಮಾರ್‌ ಸೂಚನೆ ಮೇರೆಗೆ ಹಣ ಕೊಟ್ಟ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳನ್ನು ತಿದ್ದಲಾಗಿತ್ತು ಎಂಬುದು ಈಗಾಗಲೇ ಪತ್ತೆಯಾಗಿತ್ತು.

ಈ ಆರೋಪ ಸಂಬಂಧ ಅವರ ಹೇಳಿಕೆ ದಾಖಲಿಸಿಕೊಳ್ಳುತ್ತಿರುವ ಸಿಐಡಿ, ಅಕ್ರಮಕ್ಕೆ ಬೇರೆ ಯಾವೆಲ್ಲಾ ಹಿರಿಯ ಅಧಿಕಾರಿಗಳು ಸಾಥ್‌ ನೀಡಿದ್ದರು ಎಂಬ ಮಾಹಿತಿಯನ್ನು ಶಾಂತಕುಮಾರ್‌ ಅವರಿಂದ ಪಡೆಯಲು ತೀರ್ಮಾನಿಸಿದೆ. ಈಗಾಗಲೇ ಸಿಐಡಿ ಕಸ್ಟಡಿಯಲ್ಲಿರುವ ನೇಮಕಾತಿ ವಿಭಾಗದ ಸಿಬ್ಬಂದಿ, ಮಧ್ಯವರ್ತಿಗಳು ಶಾಂತಕುಮಾರ್‌ ಸೂಚನೆ ಮೇರೆಗೆ ಅಕ್ರಮ ಎಸಗಿರುವುದಾಗಿ ಹೇಳಿಕೆ ನೀಡಿದ್ದಾರೆ.

ಆದರೆ, ಈ ಆರೋಪಗಳನ್ನು ಶಾಂತಕುಮಾರ್‌ ನಿರಾಕರಿಸಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಮತ್ತೊಂದೆಡೆ, ಪಿಎಸ್‌ಐ ಮಾತ್ರವಲ್ಲದೆ ಕಾನ್ಸ್‌ಟೆಬಲ್‌ ಸೇರಿ ಮತ್ತಿತರ ಹುದ್ದೆಗಳ ನೇಮಕಾತಿಯಲ್ಲೂ ಶಾಂತಕುಮಾರ್‌ ಅಕ್ರಮ ಎಸಗಿರುವ ಸಾಧ್ಯತೆ ಬಗ್ಗೆ ತನಿಖಾ ತಂಡಕ್ಕೆ ಸುಳಿವು ದೊರೆತಿದ್ದು, ಈ ನಿಟ್ಟಿನಲ್ಲಿ ತನಿಖಾ ತಂಡ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದೆ.

ಇತರೆ ನೇಮಕಾತಿಗಳಲ್ಲಿಅಕ್ರಮದ ಬಗ್ಗೆ ಪುರಾವೆಗಳು ಲಭ್ಯವಾದರೆ, ನೇಮಕಾತಿ ವಿಭಾಗದಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ.

ಹಿಂದಿನ ಲೇಖನದೆಹಲಿಯಲ್ಲಿ ಅಗ್ನಿ ಅವಘಡ: 27 ಮಂದಿ ಸಜೀವ ದಹನ
ಮುಂದಿನ ಲೇಖನಪರಾರಿಗೆ ಯತ್ನಿಸಿದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ: ಕಾಲಿಗೆ ಗುಂಡಿಟ್ಟ ಪೊಲೀಸರು