ಬೆಂಗಳೂರು (Bengaluru)- ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಬಂಧಿಸಲಾಗಿದೆ.
ಪಿಎಸ್‌ಐ ನೇಮಕಾತಿ ಅಕ್ರಮದ ಜಾಡು ಹಿಡಿದು ಹೊರಟಿದ್ದ ಸಿಐಡಿಗೆ ನೇಮಕಾತಿ ವಿಭಾಗದ ಪಾತ್ರದ ಬಗ್ಗೆ ಭಾರಿ ಶಂಕೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್‌ಪಾಲ್, ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಶಾಂತಕುಮಾರ್ ಬಂಧನದೊಂದಿಗೆ ಪಿಎಸ್‌ಐ ಅಭ್ಯರ್ಥಿಗಳ ಒಎಂಆರ್ ತಿದ್ದಿದ ಆರೋಪ ಪ್ರಕರಣದಲ್ಲಿ ಬಂಧಿತರಾದ ನೇಮಕಾತಿ ವಿಭಾಗದ ಪೊಲೀಸರ ಸಂಖ್ಯೆ 5ಕ್ಕೆ ಏರಿದೆ. ಇನ್ನೂ ಕೆಲವು ಸಿಬ್ಬಂದಿ ಸಿಐಡಿ ಬಲೆಗೆ ಬೀಳುವ ಸಾಧ್ಯತೆ ಹೆಚ್ಚಳವಾಗಬಹುದು.
ಸಿಐಡಿ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಆರೋಪಿಗಳು ಅಕ್ರಮಕ್ಕೆ ಡಿವೈಎಸ್ಪಿ ಶಾಂತಕುಮಾರ್ ಸಾಥ್ ಕೊಟ್ಟಿದ್ದ ವಿಚಾರವನ್ನು ಬಾಯ್ಬಿಟ್ಟಿದ್ದರು. ಹೀಗಾಗಿ, ಅವರ ವಿರುದ್ಧದ ಸೂಕ್ತ ಪುರಾವೆಗಳಿಗಾಗಿ ಸಿಐಡಿ ಶೋಧನೆ ನಡೆಸುತ್ತಿತ್ತು. ಅಂತಿಮವಾಗಿ ಶಾಂತಕುಮಾರ್ ಅವರನ್ನು ಗುರುವಾರ ವಿಚಾರಣೆಗೆ ಕರೆಸಲಾಗಿತ್ತು. ವಿಚಾರಣೆ ವೇಳೆ ಅಕ್ರಮದಲ್ಲಿಅವರು ಶಾಮೀಲಾಗಿರುವುದು ಖಚಿತಪಡುತ್ತಿದ್ದಂತೆ ಅರೆಸ್ಟ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ 13 ವರ್ಷಗಳಿಂದ ನೇಮಕಾತಿ ವಿಭಾಗದಲ್ಲಿಯೇ ಠಿಕಾಣಿ ಹೂಡಿದ್ದ ಡಿವೈಎಸ್ಪಿ ಶಾಂತಕುಮಾರ್, ನೇಮಕಾತಿ ವಿಭಾಗವನ್ನು ಕಂಟ್ರೋಲ್‌ಗೆ ತೆಗೆದುಕೊಂಡಿದ್ದರು. ಇದಕ್ಕೆ ಹಿರಿಯ ಅಧಿಕಾರಿಗಳ ಬೆಂಬಲವೂ ದೊರಕುತ್ತಿತ್ತು.ಪಿಎಸ್‌ಐ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳನ್ನು ಮಧ್ಯವರ್ತಿಗಳ ಮೂಲಕ ಡೀಲ್ ನಡೆಸುತ್ತಿದ್ದ ಶಾಂತಕುಮಾರ್, ಲಕ್ಷಗಟ್ಟಲೇ ಹಣ ಪಡೆಯುತ್ತಿದ್ದರು. ಈ ಹಣದಲ್ಲಿಆಯಕಟ್ಟಿನ ಜಾಗದಲ್ಲಿ ಕುಳಿತಿದ್ದವರಿಗೂ ತಲುಪಿಸುತ್ತಿದ್ದರು. ಅಷ್ಟೇ ಅಲ್ಲದೆ, ಒಎಂಆರ್ ತಿದ್ದಿರುವ ಆರೋಪಿಗಳಿಗೆ ನೇರವಾಗಿ ಸಹಕಾರ ನೀಡಿ ಅಕ್ರಮವಾಗಿ ಕೆಲ ಅಭ್ಯರ್ಥಿಗಳು ಹುದ್ದೆ ಗಿಟ್ಟಿಸಿಕೊಳ್ಳಲು ಕಾರಣರಾಗಿದ್ದರು ಎಂಬ ಆರೋಪಗಳಿವೆ. ಈ ನಿಟ್ಟಿನಲ್ಲಿ ಸಿಐಡಿ ಹೆಚ್ಚಿನ ತನಿಖೆ ಮುಂದುವರಿಸಿದೆ.
ರಾಜ್ಯಪಾಲರಿಗೆ ಮನವಿ
ಪಿಎಸ್‌ಐ ನೇಮಕಾತಿ ರದ್ದುಪಡಿಸಿರುವ ಆದೇಶ ಮರುಪರಿಶೀಲಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳ ನಿಯೋ ಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಪಿಎಸ್‌ಐ ತಾತ್ಕಾಲಿಕ ಪಟ್ಟಿಯಲ್ಲಿಸ್ಥಾನ ಪಡೆದಿದ್ದ ಓಂಕಾರಪ್ಪ, ತೇಜಸ್ ಮತ್ತಿತರ ಅಭ್ಯರ್ಥಿಗಳ ನಿಯೋಗ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ‘‘ಪ್ರಕರಣದ ಸಂಬಂಧ ಸಿಐಡಿ ಇನ್ನೂ ತನಿಖೆ ನಡೆಸುತ್ತಿದೆ. ಆದರೆ, ಸರ್ಕಾರ ನೇಮಕಾತಿಯನ್ನೇ ರದ್ದುಪಡಿಸಿದೆ. ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ಪ್ರತಿಭಾವಂತರಿಗೆ ಅನ್ಯಾಯವಾಗಲಿದೆ ತಿಳಿಸಿದೆ.