ಮನೆ ರಾಜ್ಯ ಪಿಎಸ್‌ ಐ ಅಕ್ರಮ ನೇಮಕಾತಿ: 7 ಆರೋಪಿಗಳ ಜಾಮೀನು ತೀರ್ಪು ಕಾಯ್ದಿರಿಸಿ ಹೈಕೋರ್ಟ್‌

ಪಿಎಸ್‌ ಐ ಅಕ್ರಮ ನೇಮಕಾತಿ: 7 ಆರೋಪಿಗಳ ಜಾಮೀನು ತೀರ್ಪು ಕಾಯ್ದಿರಿಸಿ ಹೈಕೋರ್ಟ್‌

0

ಬೆಂಗಳೂರು (Bengaluru): ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ.

ಆರೋಪಿಗಳಾದ ಸಿ.ಎನ್‌.ಶಶಿಧರ್‌, ಆರ್‌.ಶರತ್‌ ಕುಮಾರ್‌, ಎಚ್‌.ಯು.ರಘವೀರ್‌, ಕೆ.ಸಿ.ದಿಲೀಪ್‌ ಕುಮಾರ್‌, ಎಚ್‌.ಆರ್‌.ಪ್ರವೀಣ್‌ ಕುಮಾರ್‌, ಕೆ.ಸೂರಿ ನಾರಾಯಣ್‌ ಜಾಮೀನು ಕೋರಿ ಮತ್ತು ತಲೆಮರೆಸಿಕೊಂಡಿರುವ ಆರೋಪಿಯಾದ ಬ್ಯಾಡರಹಳ್ಳಿ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ನವೀನ್‌ ಪ್ರಸಾದ್‌ ನಿರೀಕ್ಷಣಾ ಜಾಮೀನಿಗಾಗಿ ಪ್ರತ್ಯೇಕ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾ.ಎಚ್‌.ಪಿ.ಸಂದೇಶ್‌ ಅವರಿದ್ದ ಏಕಸದಸ್ಯಪೀಠ ತೀರ್ಪು ಕಾಯ್ದಿರಿಸಿತು. ಅಲ್ಲದೆ, ಸಾಧ್ಯವಾದರೆ ಶುಕ್ರವಾರ ತೀರ್ಪು ಪ್ರಕಟಿಸಲಾಗುವುದು. ಇಲ್ಲವೇ ತೀರ್ಪಿನ ಉಕ್ತಲೇಖನ ನೀಡಲಾಗುವುದೆಂದು ನ್ಯಾಯಪೀಠ ತಿಳಿಸಿದೆ.

ಅರ್ಜಿದಾರರ ಪರ ವಕೀಲರು ಜಾಮೀನು ನೀಡುವಂತೆ ಮನವಿ ಮಾಡಿದರು. ಅದಕ್ಕೆ ಆಕ್ಷೇಪಿಸಿದ ಎಸ್‌ಪಿಪಿ ವಿ.ಎಸ್‌.ಹೆಗ್ಡೆ ಜಾಮೀನು ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಕೋರಿದರು.

ಈ ಮಧ್ಯೆ ಪರೀಕ್ಷಾ ನೇಮಕ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎಡಿಜಿಪಿ ಅಮೃತ್‌ ಪೌಲ್‌ ಅವರು ತನಿಖೆಗೆ ಸಹಕರಿಸದ ಕಾರಣ ಮಂಪರು ಪರೀಕ್ಷೆಗೆ ಅನುಮತಿ ಕೋರಲಾಗಿದೆ ಎಂದು ಸರಕಾರಿ ವಿಶೇಷ ಅಭಿಯೋಜಕರು ಹೈಕೋರ್ಟ್‌ಗೆ ತಿಳಿಸಿದರು.

ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್‌ ಪೌಲ್‌, ಸಬ್‌ ಇನ್‌ ಸ್ಪೆಕ್ಟರ್‌ ಸೇರಿ ಕೆಲ ಪೊಲೀಸ್‌ ಅಧಿಕಾರಿಗಳೇ ಹಗರಣದಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಇಡೀ ಪೊಲೀಸ್‌ ಇಲಾಖೆಗೆ ಕೆಟ್ಟ ಹೆಸರು ಬಂದಿದೆ. ಇದಲ್ಲದೇ ಇನ್ನೂ ಹಲವು ಕಪ್ಪು ಕುರಿಗಳು ಹಗರಣದಲ್ಲಿ ಭಾಗಿಯಾಗಿದ್ದು, ಅವರನ್ನು ಪತ್ತೆ ಹಚ್ಚಬೇಕಿದೆ. ಅಮೃತ್‌ ಪೌಲ್‌ ತನಿಖೆಗೆ ಸಹಕರಿಸದ ಕಾರಣ ಮಂಪರು ಪರೀಕ್ಷೆಗೆ ಅನುಮತಿ ಕೋರಲಾಗಿದೆ ಎಂದರು.

ಈ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬೇಲಿಯೇ ಎದ್ದು ಹೊಲ ಮೇಯಲು ಏಕೆ ಬಿಟ್ಟಿರಿ? ಕಪ್ಪು ಕುರಿಗಳನ್ನು ಪತ್ತೆ ಹಚ್ಚುವುದು ನಿಮ್ಮ ಕರ್ತವ್ಯವಲ್ಲವೇ? ಅಧಿಕಾರಿಗಳೇ ಅಕ್ರಮ ನಡೆಸಲು ಬಾಗಿಲು ತೆರೆದಿದ್ದಾರಲ್ಲವೇ? ಅವರನ್ನು ಉಕ್ಕಿನ ಕೈಗಳಿಂದ ದಂಡಿಸುವುದು ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸಿತು.

ಅದಕ್ಕೆ ಉತ್ತರಿಸಿದ ಎಸ್‌ಪಿಪಿ ”ಯಾವುದೇ ಲೋಪಕ್ಕೆ ಅವಕಾಶವಿಲ್ಲದೆ ಅತ್ಯಂತ ವೈಜ್ಞಾನಿಕ, ವೃತ್ತಿಪರ ಮತ್ತು ಕಾನೂನಾತ್ಮಕವಾಗಿ ತನಿಖೆ ನಡೆಸಲಾಗುತ್ತಿದೆ. ಇನ್ನೂ ಅಕ್ರಮದಲ್ಲಿ ಎಲ್ಲಾ ಅಭ್ಯರ್ಥಿಗಳು ಭಾಗಿಯಾಗಿದ್ದಾರೆಂದು ಹೇಳಲಾಗದು. ಕೆಲ ಅಭ್ಯರ್ಥಿಗಳ ಪಾತ್ರವಿದ್ದು, ಅವರ ವಿರುದ್ಧ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ” ಎಂದು ಹೇಳಿದರು.


ಹಾಗೆಯೇ, ಸದ್ಯ ಪ್ರಕರಣ ತನಿಖೆಯಲ್ಲಿದೆ. ಅಮೃತ್‌ ಪೌಲ್‌ ಅವರ ಮೊಬೈಲ್‌ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ. ಅದನ್ನು ಆಧರಿಸಿ ಹೆಚ್ಚಿನ ತನಿಖೆ ನಡೆಸಿದರೆ ಮತ್ತಷ್ಟು ಸಂಗತಿಗಳು ಬಯಲಾಗಬಹುದು ಎಂದರು.

ಶ್ರೀಧರ್‌ ಎಂಬುವರಿಂದ 2 ಕೋಟಿ ರೂ. ಗಳಿಗೂ ಅಧಿಕ ಹಣ ವಸೂಲಿ ಮಾಡಲಾಗಿದೆ. ಆ ಹಣ ಯಾರು? ಯಾರಿಂದ ಪಡೆದರು ಎಂಬ ಬಗ್ಗೆ ವಿವರ ಕಲೆ ಹಾಕಬೇಕಿದೆ. ಆರೋಪಿಗಳು ಮತ್ತು ಅಭ್ಯರ್ಥಿಗಳ ನಡುವಿನ ಸಂಭಾಷಣೆ, ಅವರು ಹಣಕಾಸಿಗೆ ಬೇಡಿಕೆಯಿಟ್ಟಿರುವುದು, ಕಡಿಮೆ ಮಾಡಲು ನಡೆಸಿದ ಚೌಕಾಸಿ, ಹಣ ಪಾವತಿಯಾದ ಮತ್ತು ವಸೂಲಿ ಮಾಡಿರುವ ಬಗ್ಗೆ ಸಂಪೂರ್ಣ ವಿವರಗಳನ್ನು ಒಳಗೊಂಡ ಸಿಡಿಆರ್‌ ಲಭ್ಯವಿದೆ. ಆದ್ದರಿಂದ ಅರ್ಜಿದಾರರಿಗೆ ಜಾಮೀನು ನೀಡಬಾರದು. ಅರ್ಜಿಗಳನ್ನು ದಂಡ ಸಹಿತ ವಜಾಗೊಳಿಸಬೇಕು ಎಂದು ಎಸ್‌ಪಿಪಿ ನ್ಯಾಯಪೀಠವನ್ನು ಕೋರಿದರು.